-ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಕನಕರಾಜು ಕನಕಪುರ: ಪೊಲೀಸರು ಅಧಿಕಾರದ ಅಮಲಿನಲ್ಲಿ ಮಾನವೀಯತೆ ಮರೆತು ದಂಡ ಹಾಕುವ ನೆಪದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಜಕ್ಕೇಗೌಡನ ದೊಡ್ಡಿ ಕಾಂಗ್ರೆಸ್ ಮುಖಂಡ ಕನಕರಾಜು ಆಕ್ರೋಶ ವ್ಯಕ್ತಪಡಿಸಿದ್ದರು. ನಗರದ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕನಕರಾಜು, ನನ್ನ ಮಗ ವಿಜಯ್ ಕುಮಾರ್ ಅವನ ಸ್ನೇಹಿತ ಇಬ್ಬರೂ ಜಕ್ಕೇಗೌಡನ ದೊಡ್ಡಿ ಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಕನಕಪುರಕ್ಕೆ ತೆರಳುವಾಗ ಮಾರ್ಗ ಮಧ್ಯೆ ಶಿವನಹಳ್ಳಿ ಬಳಿ ದಂಡ ಹಾಕಲು ಅಡ್ಡಗಟ್ಟಿರುವ ಸಂಚಾರ ಠಾಣಾ ಪೊಲೀಸರು ನನ್ನ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅದರ ಪರಿಣಾಮ ಬಲಕಣ್ಣಿಗೆ ಗಂಭೀರ ಗಾಯವಾಗಿದೆ. ದೃಷ್ಟಿ ಕಳೆದುಕೊಂಡರೆ ಅದಕ್ಕೆ ಪೊಲೀಸರೆ ಹೊಣೆ ಎಂದು ಆರೋಪಿಸಿದರು. ಪೊಲೀಸರು ಮಾನವೀಯತೆ ಮರೆತು ಅಧಿಕಾರದ ಅಮಲಿನಲ್ಲಿ ತನ್ನ ವ್ಯಾಪ್ತಿ ಮೀರಿ ವರ್ತಿಸುತ್ತಿದ್ದಾರೆ. ದಂಡ ವಿಧಿಸುವ ನೆಪದಲ್ಲಿ ಸಾರ್ವಜನಿಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ್ದರೆ ಕಾನೂನಿನ ಪ್ರಕಾರ ದಂಡ ವಿಧಿಸಬೇಕಾಗಿತ್ತು. ವಾಹನವನ್ನು ವಶಕ್ಕೆ ಪಡೆಯಬಹುದಿತ್ತು. ಅದನ್ನು ಬಿಟ್ಟು ಹಲ್ಲೆ ಮಾಡುವುದು ನ್ಯಾಯವೇ ಎಂದು ಪ್ರಶ್ನಿಸಿ, ಈ ಸಂಬಂಧ ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. (ಫೋಟೋ ಮಗ್‌ಶಾಟ್ ಮಾತ್ರ ಸಾಕು)