(ಮಸ್ಟ್) ವಿದ್ಯುತ್ ಆಘಾತಕ್ಕೆ ವೃದ್ಧ ಬಲಿ: ಜನಾಕ್ರೋಶ

KannadaprabhaNewsNetwork |  
Published : Jul 16, 2026, 03:15 AM IST
ಕೃಷ್ಣಪ್ಪ ಕುಲಾಲ್  | Kannada Prabha

ಸಾರಾಂಶ

ಗುಡ್ಡದಲ್ಲಿ ಸೊಪ್ಪು ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 82 ವರ್ಷದ ವೃದ್ಧ ಮೃತಪಟ್ಟಿರುವ ದುರ್ಘಟನೆ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ರಾಜೀವ ಪಲಿಕೆ ಎಂಬಲ್ಲಿ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಗುಡ್ಡದಲ್ಲಿ ಸೊಪ್ಪು ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ 82 ವರ್ಷದ ವೃದ್ಧ ಮೃತಪಟ್ಟಿರುವ ದುರ್ಘಟನೆ ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ರಾಜೀವ ಪಲಿಕೆ ಎಂಬಲ್ಲಿ ಮಂಗಳವಾರ ನಡೆದಿದೆ.ಕೃಷ್ಣಪ್ಪ ಕುಲಾಲ್ (82) ಮೃತರು. ಕೃಷ್ಣಪ್ಪ ಕುಲಾಲ್ ಮನೆ ಸಮೀಪದ ಗುಡ್ಡದಲ್ಲಿ ಸೊಪ್ಪು ಕೊಯ್ಯುವ ಕೆಲಸ ಮಾಡುತ್ತಿದ್ದರು. ಈ ವೇಳೆ ಶಂಭೂರು ಎ.ಎಂ.ಆರ್. ಸ್ಥಾವರದಿಂದ ವಿದ್ಯುತ್ ಪೂರೈಕೆಯಾಗುವ 110 ಕೆ.ವಿ. ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಗೊಂಡು ತೀವ್ರ ಆಘಾತಕ್ಕೊಳಗಾಗಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿದ್ದವರು ತಕ್ಷಣ ನೆರವಿಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ಭೇಟಿ, ಗ್ರಾಮಸ್ಥರ ಪಟ್ಟು: ಘಟನೆಯ ಬಳಿಕ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಶಂಭೂರು ಎ.ಎಂ.ಆರ್. ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ವಿದ್ಯುತ್ ಮಾರ್ಗದ ಕಾಮಗಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂಬ ಆರೋಪವನ್ನು ಕೆಲವರು ವ್ಯಕ್ತಪಡಿಸಿದ್ದು, ಕ್ರಮಕ್ಕೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮೆಸ್ಕಾಂ ಹಾಗೂ ಎ.ಎಂ.ಆರ್. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ಸೂಚನೆ: ಘಟನೆಯ ಕುರಿತು ಮಾಹಿತಿ ಪಡೆದ ಶಾಸಕ ರಾಜೇಶ್ ನಾಯ್ಕ್ ಅವರು ಪೊಲೀಸ್ ಇಲಾಖೆ, ಮೆಸ್ಕಾಂ ಹಾಗೂ ಎ.ಎಂ.ಆರ್. ಅಧಿಕಾರಿಗಳೊಂದಿಗೆ ಸಂಪರ್ಕಿಸಿ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿಯ ಆರೋಪ: ಮಾಜಿ ಬೂಡ ಅಧ್ಯಕ್ಷ ಸದಾಶಿವ ಕುಲಾಲ್ ಅವರು, ಎ.ಎಂ.ಆರ್. ಸಂಸ್ಥೆಯ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆದಿರುವುದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. 110 ಕೆವಿ ವಿದ್ಯುತ್ ಮಾರ್ಗದ ಕಾಮಗಾರಿಯಲ್ಲಿ ಕಾರಿಡಾರ್ ಅಗಲ, ವಿದ್ಯುತ್ ತಂತಿಗಳ ಎತ್ತರ ಸೇರಿದಂತೆ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿಲ್ಲ ಎಂದು ಅವರು ದೂರಿದ್ದಾರೆ. ಪೊಲೀಸರ ಪರಿಶೀಲನೆ: ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಸ್ಪತ್ರೆ ಹಾಗೂ ಘಟನಾ ಸ್ಥಳದಲ್ಲಿ ಜಮಾಯಿಸಿದ ಕಾರಣ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆನಂತಪದ್ಮನಾಭ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ, ತನಿಖೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಳುವಾಯಿ ಘಟಕಕ್ಕೆ ಮುರಳಿಧರ್ ಎಸ್. ಅಧ್ಯಕ್ಷರಾಗಿ ಆಯ್ಕೆ
ಪಂಚವರ್ಣಕ್ಕೆ ಹಸಿರು ರಥ ಹಸ್ತಾಂತರ