ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕುರುಬೂರು ಶಾಂತಕುಮಾರ್ ಬಣದ ಜಿಲ್ಲಾ ಸಂಘದ ನಿಯೋಗವು ಜಿಲ್ಲಾಧ್ಯಕ್ಷ ಶ್ರೀನಿವಾಸಲು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭುರವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಸಲ್ಲಿಸಿದ ಮನವಿಯಲ್ಲಿ, ರಾಜ್ಯದಲ್ಲೇ ಅತಿ ಕಡಿಮೆ ಮಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಾಖಲಾಗಿದ್ದು, ಜುಲೈ ತಿಂಗಳು ಕಳೆದರೂ ಬಹುತೇಕ ಕಡೆ ಬಿತ್ತನೆ ನಡೆದಿಲ್ಲ. ಕೆರೆ- ಕಟ್ಟೆಗಳು ಬತ್ತಿ, ಅಂತರ್ಜಲ ಮಟ್ಟ ಕುಸಿದು ನೂರಾರು ಕೊಳವೆ ಬಾವಿಗಳು ಒಣಗಿವೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದ್ದು, ರೈತರು ಹಾಗೂ ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿವರಿಸಿದರು.
ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಬೆಳೆ ಪರಿಹಾರ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿ ಮುಂದೂಡಿಕೆ ಮತ್ತು ಬಡ್ಡಿ ಮನ್ನಾ, ನರೇಗಾ ಯೋಜನೆಯಡಿ 200 ದಿನಗಳ ಉದ್ಯೋಗ ಖಾತರಿ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಬರ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಬಗ್ಗೆ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಕುಡಿಯುವ ನೀರು, ಮೇವು ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬೆಳೆ ವಿಮೆ ಕುರಿತು ರೈತರಿಗೆ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ಪರಿಸ್ಥಿತಿಯ ಸಮಗ್ರ ಪರಿಶೀಲನೆಯ ಬಳಿಕ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು, ನಿಮ್ಮ ಬೇಡಿಕೆಗಳಲ್ಲಿ ನಮ್ಮ ಹಂತದಲ್ಲಿಯೇ ಪರಿಹಾರ ಕಾಣಿಸುವಂತಹವನ್ನು ಶೀಘ್ರವೇ ಪರಿಹರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.