ಸುಪ್ರೀಂನ ಅಂಗಳದಲ್ಲಿ ಚೆಂಡು । ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ। ನ್ಯಾಯಾಲಯ ಫೈನಲ್ ಮಾಡಿಲ್ಲ
ಅರಣ್ಯರೋಧನಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯದಲ್ಲಿ ಗುರುತು ಮಾಡಿದ್ದ ಸುಮಾರು 9 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ನ ಪಟ್ಟಿಯನ್ನು ಪರಿಷ್ಕರಿ ಸಿದ್ದು, ಈ ವಿಸ್ತೀರ್ಣವನ್ನು 3.30 ಲಕ್ಷ ಹೆಕ್ಟೇರ್‌ಗೆ ಇಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ 1.44 ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಎಂಬುದಾಗಿ ಗುರುತು ಮಾಡಲಾಗಿದ್ದು, ಈ ವಿಸ್ತೀರ್ಣವನ್ನು 52,900.11 ಹೆಕ್ಟೇರ್‌ಗೆ ಇಳಿಸಲಾಗಿದೆ. ಅದ್ದರಿಂದ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಸಂಬಂಧ ರಾಜ್ಯ ಸರ್ಕಾರ 2019 ರಲ್ಲಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರವನ್ನು ಸಲ್ಲಿಸಿದೆ. ಅಂದರೆ, ಈ ಕುರಿತು ಈವರೆಗೆ ಯಾವುದೇ ಅಂತಿಮ ತೀರ್ಪು ಬಂದಿಲ್ಲ. ಹಾಗಾಗಿ ಸರ್ಕಾರದ ಭರವಸೆಯೇ ಅಂತಿಮ ಅಲ್ಲ. ಅದ್ದರಿಂದ ಡೀಮ್ಡ್‌ನ ತೂಗುಗತ್ತಿ ಮಲೆನಾಡಿಗರ ನೆತ್ತಿಯ ಮೇಲೆ ತೂಗಾಡುತ್ತಿದೆ. ಅಂದರೆ, 1994 ರಲ್ಲೇ ಸಲ್ಲಿಸಿರುವ ಡೀಮ್ಡ್ ಫಾರೆಸ್ಟ್‌ನ ಪಟ್ಟಿಯೇ ಅಂತಿಮ ಮಾಡಿದ್ದೆಯಾದರೆ, ಸರ್ಕಾರದ ಭರವಸೆ ಮಣಕೈಗೆ ತುಪ್ಪ ಸವರಿದಂತಾಗುತ್ತದೆ. ಅದ್ದರಿಂದ ಜನರು ಆತಂಕದಲ್ಲಿದ್ದಾರೆ.ಸೂಕ್ಷ್ಮ ನಡಿಗೆ ಡೀಮ್ಡ್ ಫಾರೆಸ್ಟ್ ಮೊದಲ ಪಟ್ಟಿಯಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಪರಿಷ್ಕರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಯಾವ ಯಾವ ಪ್ರದೇಶವನ್ನು ಕೈಬಿಡಲಾಗಿದೆ ಎಂಬುದನ್ನು ಸಹ ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ಕಳುಹಿಸಿ ಅಲ್ಲಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅದನ್ನು ಪ್ರಚುರ ಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಹಾಗೆನಾದರೂ ಮುಂದೆ ಹೆಜ್ಜೆ ಇಟ್ಟರೆ ತಲೆ ದಂಡವಾಗಲಿದೆ. ಕಾರಣ, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಯಾವುದೇ ಅಂತಿಮ ತೀರ್ಮಾನ ಆಗಿಲ್ಲ, ಪರಿಸ್ಥಿತಿ ಹೀಗಿರುವಾಗಲೇ, ತಾವು ಸಲ್ಲಿಸಿರುವ ಪ್ರಮಾಣ ಪತ್ರದ ಆಧಾರದ ಪಟ್ಟಿಯನ್ನು ಪ್ರಕಟಿಸಿದರೆ ತಪ್ಪಾಗುತ್ತದೆ. ಹಾಗಾಗಿ ಆಡಳಿತ ಯಂತ್ರ ಜಾಣ ನಡಿಗೆಯಲ್ಲಿ ಸಾಗುತ್ತಿದೆ. ಅಂದರೆ, ಜನರು ಇನ್ನೂ ನಿರಾಳವಾಗಿಲ್ಲ.
--- ಬಾಕ್ಸ್ --ಡೀಮ್ಡ್ ಫಾರೆಸ್ಟ್ ವಿವಾದ
1995, ಡೀಮ್ಡ್ ಫಾರೆಸ್ಟ್ ವಿವಾದ ಹುಟ್ಟಿಕೊಂಡ ವರ್ಷ. ಅಂದರೆ, ಅದೇ ವರ್ಷದಲ್ಲಿ ಟಿ.ಎನ್. ಗೋಧ ವರ್ಮನ್ ಅವರು ಅರಣ್ಯ ಪ್ರದೇಶದ ವ್ಯಾಖ್ಯಾನ ಹಾಗೂ ವಿಸ್ತೀರ್ಣ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾವೆ ಹೂಡಿದರು. ಈ ಸಂಬಂಧ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಂದ ಅರಣ್ಯ ಒಟ್ಟು ಪ್ರದೇಶದ ಮಾಹಿತಿಯನ್ನು ತರಿಸಿ ಕೊಂಡಿತು. ವ್ಯಾಖ್ಯಾನದ ಪ್ರಶ್ನೆ ಬಂದಾಗ ಇಂತಿಷ್ಟು ಪ್ರದೇಶದಲ್ಲಿ ಮರಗಳಿದ್ದರೆ, ಅವುಗಳನ್ನು ಡೀಮ್ಡ್ ಎಂಬುದಾಗಿ ಪರಿಗಣಿಸಿ ವರದಿ ನೀಡುವಂತೆ ಸರ್ಕಾರ ಹೇಳಿದ ಮೇರೆಗೆ ಅರಣ್ಯ ಇಲಾಖೆಗೆ ತಾತ್ಕಾಲಿಕ ವಾಗಿ ಗಿಡಗಳನ್ನು ಬೆಳೆಸಲು ಕೊಟ್ಟಿದ್ದ ನೆಡುತೋಪು, ಗೋಮಾಳ ಪ್ರದೇಶವನ್ನು ಸೇರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 1.44 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಗುರುತು ಮಾಡಲಾಯಿತು. -----