ಶಾಸಕ ಬಸವರಾಜ ಶಿವಣ್ಣವರ ಮತ್ತು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ರೈತ ಹೋರಾಟ ಸಮಿತಿ ಸದಸ್ಯರ ಮನವಿ
ಬರಪೀಡಿತ ಜಿಲ್ಲೆಯ ರೈತರ ಪ್ರತಿ ಎಕರೆಗೆ₹25 ಸಾವಿರ ಪರಿಹಾರ ನೀಡುವುದೂ ಸೇರಿದಂತೆ ಕೃಷಿ ಅಭಿವೃದ್ಧಿಗೆ ಮಾಡಿದ ವಿಎಸ್ಎಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ರೈತ ಹೋರಾಟ ಸಮಿತಿ ಸದಸ್ಯರು ಶಾಸಕ ಬಸವರಾಜ ಶಿವಣ್ಣವರ ಮತ್ತು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಮುರಿಗೆಪ್ಪ ಶೆಟ್ಟರ, ಬರಗಾಲ ಘೋಷಣೆ ಮಾಡಿ 4 ತಿಂಗಳು ಗತಿಸಿವೆ. ಕೇಂದ್ರದ ಕಡೆಗೆ ಕೈತೋರಿಸುತ್ತಿರುವ ರಾಜ್ಯ ಸರ್ಕಾರ ಹೇಡಿತನ ಪ್ರದರ್ಶಿಸುತ್ತಿದೆ. ರಾಜ್ಯದ ರೈತರ ಹಿತಾಸಕ್ತಿ ದೃಷ್ಟಿಯಿಂದಲಾದರೂ ತಮ್ಮ ಪಾಲಿನ ಪರಿಹಾರ ಮೊತ್ತ ಘೋಷಿಸುವಂತೆ ಆಗ್ರಹಿಸಿದರು.ರೈತ ಸಂಘ ಬರಪೀಡಿತ ಪ್ರದೇಶದ ವ್ಯಾಪ್ತಿಯ ಪ್ರತಿ ಎಕರೆಗೆ ₹25 ಪರಿಹಾರ ನೀಡುವಂತೆ ಬೇಡಿಕೆ ಇಟ್ಟಿದೆ. ಪ್ರಕೃತಿ ವಿಪತ್ತು ನಿಧಿಯಿಂದ (ಎನ್‌ಡಿಆರ್‌ಎಫ್) ಹೆಕ್ಟೇರ್‌ಗೆ ₹8500 ಕೇಂದ್ರ ಸರ್ಕಾರದಿಂದ ಸಿಗುವ ಸಾಧ್ಯತೆಯಿದೆ. ಅದಕ್ಕೆ ಇನ್ನಷ್ಟು ಸೇರಿಸಿ ಪರಿಹಾರ ನೀಡುವ ಕುರಿತು ಕೇಂದ್ರದ ಬಳಿಯೇ ಕೇಳುತ್ತೇವೆ. ಆದರೆ ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ತನ್ನ ಪಾಲನ್ನು ಘೋಷಿಸುವಂತೆ ಆಗ್ರಹಿಸಿದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ, ಹಗಲಿನಲ್ಲಿ 7 ತಾಸು ತ್ರಿಫೇಸ್ ವಿದ್ಯುತ್ ಕೊರತೆ ಸೇರಿದಂತೆ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿವೆ. ಸಮಸ್ಯೆಗಳ ಪರಿಹಾರಕ್ಕೆ ಇನ್ನೆಷ್ಟು ವರ್ಷಗಳು ಕಾಯಬೇಕು ಎಂದು ಪ್ರಶ್ನಿಸಿದ ಅವರು, ಸೂಕ್ತ ಸಮಯದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯ ಎಂದರು.