ಕುಷ್ಟಗಿ: ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಹಿಂದುಗಡೆ ನಿರ್ಮಿಸಿದ 100 ಹಾಸಿಗೆಯ ಮಹಿಳೆಯರು ಮತ್ತು ನವಜಾತ ಶಿಶುಗಳ ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಕೂಡಲೇ ಕಾರ್ಯಾರಂಭಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳಗೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಸೇನೆಯ) ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಪ್ರಸ್ತುತ ಕುಷ್ಟಗಿ ಪಟ್ಟಣದಲ್ಲಿ ತಾಲೂಕಾಸ್ಪತ್ರೆ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಸರಿಯಾದ ಸೌಲಭ್ಯ ಇಲ್ಲದ್ದಕ್ಕೆ ಒಳ ಮತ್ತು ಹೊರರೋಗಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಮಹಿಳೆಯರು ಮತ್ತು ನವಜಾತ ಶಿಶುಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ 100 ಹಾಸಿಗೆಗಳ ಪ್ರತ್ಯೇಕ ಆಸ್ಪತ್ರೆ ಕಟ್ಟಡ ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿ ಈಗಾಗಲೇ ಉದ್ಘಾಟಿಸಲಾಗಿದೆ. ಹೊಸ ಆಸ್ಪತ್ರೆ ಕಟ್ಟಡದಲ್ಲಿ ಒಳ, ಹೊರ ರೋಗಿಗಳಿಗಾಗಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಅನೇಕ ಸೌಲಭ್ಯ ಒದಗಿಸಬೇಕಾಗಿದೆ. ಇದಲ್ಲದೇ ರೋಗಿಗಳಿಗಾಗಿ ಕ್ಯಾಂಟೀನ್, ರಕ್ತನಿಧಿ (ಬ್ಲಡ್ ಬ್ಯಾಂಕ್),ಸ್ಥಾಪಿಸುವ ಮೂಲಕ ಆಸ್ಪತ್ರೆ ಕಾರ್ಯಾರಂಭಗೊಳಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, ಕುಷ್ಟಗಿ ಆಸ್ಪತ್ರೆಯ ಸಿಬ್ಬಂದಿಗಳ ನೇಮಕಾತಿಯ ಪ್ರಕ್ರೀಯೆ ಆರಂಭವಾಗಿದೆ, ಎಲ್ಲವನ್ನು ಸರಿ ಮಾಡಿಕೊಂಡು ಶೀಘ್ರದಲ್ಲಿ ಆಸ್ಪತ್ರೆಯ ಕಾರ್ಯಾರಂಭ ಮಾಡಲಾಗುವದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಕೊಪ್ಪಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಲಲಿತಮ್ಮ ಮಜ್ಜಿಗೆ,ಸಿದ್ದಪ್ಪ ಕಲಾಲಬಂಡಿ, ವೆಂಕಟೇಶ ಹನುಮಸಾಗರ,ಮಾರುತಿ ನಾಯಕ ಸೇರಿದಂತೆ ಅನೇಕರು ಇದ್ದರು.