ಸದನದಲ್ಲಿ ಧ್ವನಿ ಎತ್ತಿದ ಶಾಸಕ ದಿನಕರ ಶೆಟ್ಟಿ
ಸಾಗರಮಾಲಾ ಯೋಜನೆ ಅಡಿ ಕುಮಟಾ-ತದಡಿ ಜಲ ಮಾರ್ಗದ ಸಮಗ್ರ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿದ್ದು, ಇದನ್ನ ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಸದನದಲ್ಲಿ ಆಗ್ರಹಿಸಿದ್ದಾರೆ.ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಪಾವತಿಸುವ ಕರಾವಳಿ ಪ್ರದೇಶವನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ವಿಧಾನಸಭೆಯಲ್ಲಿ ದೂರಿದ್ದಾರೆ. ಸಾಗರಮಾಲಾ ಯೋಜನೆ ಅಡಿ ನಡೆಯಬೇಕಿದ್ದ ಕೆಲಸಗಳನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದವರು ಆಕ್ಷೇಪಿಸಿದ್ದಾರೆ.೨೦೨೧ರಲ್ಲಿ ಮಂಜೂರಾದ ಕಾಮಗಾರಿ ಈವರೆಗೂ ಪೂರ್ಣವಾಗಿಲ್ಲ. ಸರ್ಕಾರದ ಬಳಿ ದುಡ್ಡಿಲ್ಲ ಎಂದು ಜನ ಮಾತನಾಡುತ್ತಿದ್ದಾರೆ. ಗುತ್ತಿಗೆದಾರರಿಗೆ ಸಹ ಹಣ ಪಾವತಿ ಆಗದ ಕಾರಣ ಕಾಮಗಾರಿ ಮುಂದುವರೆದಿಲ್ಲ. ಈ ವಿಷಯವನ್ನು ಮೀನುಗಾರಿಕೆ ಹಾಗೂ ಜಲಸಾರಿಗೆ ಸಚಿವರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.ಬಜೆಟ್‌ನಲ್ಲಿ ಮೀನುಗಾರಿಕೆಗೆ ಒತ್ತು ಕೊಟ್ಟಿಲ್ಲ. ಸಮುದ್ರ ತಡೆಗೋಡೆ ಮಂಜೂರಿ ಆಗಿದ್ದರೂ ಅದರ ಕೆಲಸ ಮುಗಿದಿಲ್ಲ. ಕರಾವಳಿಗೆ ಹಾಗೂ ಮೀನುಗಾರಿಕೆಗೆ ಯಾವುದೇ ಕೊಡುಗೆ ಇಲ್ಲದ ಕಾರಣ ಜನ ನೋವಿನಲ್ಲಿದ್ದಾರೆ ಎಂದು ಶಾಸಕರು ಹೇಳಿದರು.
ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಸಚಿವ ಪ್ರಿಯಾಂಕ ಖರ್ಗೆ ಈ ವಿಷಯವಾಗಿ ದಿನಕರ ಶೆಟ್ಟಿ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಸಾಗರಮಾಲಾ ಯೋಜನೆ ಅಡಿ ೧೫-೨೦ ಕಾಮಗಾರಿ ಮಂಜೂರಿಯಾಗಿದ್ದು, ಅದಕ್ಕೆ ಸಿಆರ್‌ಝಡ್ ಅನುಮತಿ ಸಿಕ್ಕಿರಲಿಲ್ಲ. ೨೦೨೪ರಲ್ಲಿ ಹಲವು ಯೋಜನೆ ರದ್ದಾಗಿದೆ. ಮತ್ತೆ ಮಂಜೂರಿಗಾಗಿ ಮುಖ್ಯಮಂತ್ರಿಗಳೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಇದಕ್ಕೆ ಸ್ಪಂದಿಸಿಲ್ಲ ಎಂದು ಪ್ರಿಯಾಂಕ ಹೇಳಿದರು.ತದಡಿಯಿಂದ ಹಾವೇರಿವರೆಗಿನ ರಸ್ತೆಯನ್ನು ಸಾಗರಮಾಲಾ ಯೋಜನೆ ಅಡಿ ಮಾಡಲಾಗುತ್ತಿದೆ. ಶೇ. ೭೫ರಷ್ಟು ಕಾಮಗಾರಿ ಮುಗಿದಿದೆ. ಹೀಗಿರುವಾಗ ತದಡಿ ಜಲ ಮಾರ್ಗದ ಯೋಜನೆಗೆ ಕೇಂದ್ರ ಅಡ್ಡಗಾಲು ಹಾಕಲು ಸಾಧ್ಯವಿಲ್ಲ ಎಂದು ದಿನಕರ ಶೆಟ್ಟಿ ಮರು ಸವಾಲು ಹಾಕಿದರು.ಬಿಜೆಪಿ ಶಾಸಕರಿರುವ ಕಡೆ ಕಾಂಗ್ರೆಸ್ ಸರ್ಕಾರ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಕೇಂದ್ರದಿಂದ ಸಂಪೂರ್ಣ ಅನುಮೋದನೆ ಸಿಕ್ಕಿಲ್ಲ. ಅದಾಗಿಯೂ, ತದಡಿ ಬದಿಯಲ್ಲಿ ಜಟ್ಟಿ ಕಾಮಗಾರಿ ಪೂರ್ಣವಾಗಿದ್ದು ಕೂರ್ಸ ಕೆಲಸ ಪ್ರಗತಿಯಲ್ಲಿದೆ. ಅಘನಾಶನಿ ಕಡೆ ಕೂರ್ಸ ಕೆಲಸ ನಡೆಯುತ್ತಿದೆ. ಈ ಯೋಜನೆ ಪೂರ್ಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರದ ಪಾಲನ್ನು ರಾಜ್ಯ ಸರ್ಕಾರವೇ ಭರಿಸುವ ಅನಿವಾರ್ಯವಿದೆ ಎಂದರು.