ರೈತರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

KannadaprabhaNewsNetwork | Published : May 23, 2025 12:19 AM
ರಾಜ್ಯದ ರೈತರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅನ್ನದಾತ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಅಂತ್ಯೋದಯ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಟಿ. ಚಂದ್ರಶೇಖರ ಭೋವಿ ಒತ್ತಾಯಿಸಿದ್ದಾರೆ.
Follow Us

ದಾವಣಗೆರೆ: ರಾಜ್ಯದ ರೈತರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ, ಅನ್ನದಾತ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಅಂತ್ಯೋದಯ ಹಸಿರು ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಟಿ. ಚಂದ್ರಶೇಖರ ಭೋವಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಿಗಮ ಸ್ಥಾಪಿಸುವ ಮೂಲಕ ಮಣ್ಣಿನ ಮಕ್ಕಳ ಅಭಿವೃದ್ಧಿಗೆ ಸಂಕಲ್ಪ ಮಾಡಬೇಕು. ಉಚಿತ ವಿದ್ಯುತ್ ಯೋಜನೆ ಪುನಃ ಜಾರಿಗೆ ತರಬೇಕು. ಭೂ ಗ್ಯಾರಂಟಿ ಸೇವೆಗಳ ಸುಧಾರಣೆ ಕೇವಲ ಬಾಯಿ ಮಾತಿಗೆ ಸೀಮಿತವಾಗದೇ, ಕೃತಿಗೆ ಬರಬೇಕು. ಆದಷ್ಟು ಬೇಗನೆ ಜಮೀನುಗಳ ಪೋಡಿ ಮತ್ತು ಖಾತೆ ಮಾಡಿಕೊಡಬೇಕು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ರೈತ ಅಭಿವೃದ್ಧಿ ಕೇಂದ್ರ ಸ್ಥಾಪಿಸಿ, ಬೆಳೆಯನ್ನು ಸರ್ಕಾರವೇ ಖರೀದಿಸಬೇಕು. ಉದ್ಯೋಗ ಸೃಷ್ಟಿಸಲು ಖಾಸಗಿ ಕಂಪನಿಗಳನ್ನು ತಂದು, ರೈತರ ಕುಟುಂಬಕ್ಕೆ, ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದರು.

ನಮ್ಮ ಸಂಘಟನೆ ರೈತರ, ಕೃಷಿ ಕಾರ್ಮಿಕರಿಗೆ ಅನುಕೂಲವಾಗಲೆಂದು ಸಾಮೂಹಿಕ ಕಲ್ಯಾಣ ಮಹೋತ್ಸವ ಹಮ್ಮಿಕೊಂಡಿದೆ. ರೈತರ ಮಕ್ಕಳ ಹೆಸರು ನೋಂದಾಯಿಸುವ ಬಗ್ಗೆ, ಸಾಮೂಹಿಕ ವಿವಾಹಕ್ಕೆ ನೆರವು ನೀಡಲಿಚ್ಛಿಸುವ ದಾನಿಗಳು, ಸಂಘ- ಸಂಸ್ಥೆಗಳು ಹೆಚ್ಚಿನ ಮಾಹಿತಿಗೆ ಮೊ-73382- 51999, 77956- 38999 ಇಲ್ಲಿಗೆ ಸಂಪರ್ಕಿಸುವಂತೆ ಚಂದ್ರಶೇಖರ ಭೋವಿ ಮನವಿ ಮಾಡಿದರು.

ದಾವಣಗೆರೆ ಎಂ.ನಾಗರಾಜ ನಾಯ್ಕ, ಚನ್ನಗಿರಿ ಸಿ.ನಾಗರಾಜ, ದೇವಮ್ಮ, ಸಂಗೀತ ಕಾಬ್ಲಿ, ಜ್ಯೋತಿ, ಭೀಮವ್ವ ಭಾರತಿ, ಗೋವಿಂದರಾಜ, ಸಿದ್ದೇಶ ಇತರರು ಇದ್ದರು.

- - -

(ಟಾಪ್‌ ಕೋಟ್‌)

ದಾವಣಗೆರೆಯಲ್ಲಿ ಸೆಪ್ಟಂಬರ್‌ನಲ್ಲಿ ಉಚಿತ ರೈತ ಕಲ್ಯಾಣೋತ್ಸವ ಸಮಾವೇಶದಡಿ 1008 ಬಡ ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಗುವುದು. 396 ಜೋಡಿ ಹೆಸರು ನೋಂದಾಯಿಸಿವೆ. ವಧುವಿಗೆ ತಾಳಿ, ನವ ಜೋಡಿಗೆ ಹೊಸ ಬಟ್ಟೆ, ಭಾಂಡೆ ಸಾಮಾನುಗಳನ್ನು ಸಂಘ ನೀಡಲಾಗುವುದು. ಇದೇ ರೀತಿ ರೈತರ ಕಲ್ಯಾಣೋತ್ಸವ ಯೋಜನೆಯನ್ನು ಸರ್ಕಾರ 2026ನೇ ಸಾಲಿನಿಂದ ಆರಂಭಿಸಿ, ನೂತನ ರೈತ ದಂಪತಿಗೆ ಒಂದು ಮನೆ ಉಚಿತವಾಗಿ ನೀಡಬೇಕು.

- ಬಿ.ಟಿ. ಚಂದ್ರಶೇಖರ ಭೋವಿ, ರೈತ ಮುಖಂಡ

- - -

-23ಕೆಡಿವಿಜಿ10, 11.ಜೆಪಿಜಿ: