ಒಳ ಮೀಸಲಾತಿಗೆ ಜಾರಿಗೊಳಿಸಿಯೇ ಖಾಲಿ ಹುದ್ದೆಗಳ ಭರ್ತಿ ಮಾಡಲು ಆಗ್ರಹ

KannadaprabhaNewsNetwork |  
Published : Apr 08, 2026, 03:15 AM IST
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದರು.  | Kannada Prabha

ಸಾರಾಂಶ

ಒಳ ಮೀಸಲಾತಿ ಜಾರಿಗೊಳಿಸಿಯೇ ರಾಜ್ಯದ 56,432 ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಆಗ್ರಹಿಸಿದರು.

ಬಳ್ಳಾರಿ: ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೋಷ್ಟರ್ ಬಿಂದುಗಳನ್ನು ಸರಿಪಡಿಸಿ ಒಳ ಮೀಸಲಾತಿ ಜಾರಿಗೊಳಿಸಿಯೇ ರಾಜ್ಯದ 56,432 ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಶಿವಮೊಗ್ಗ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಶೇ. 50 ರಷ್ಟು ಮೀರಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದರೆ, ತಮಿಳುನಾಡು ಹಾಗೂ ಜಾರ್ಖಂಡ್‌ ರಾಜ್ಯಗಳಲ್ಲಿ 9ನೇ ಶೆಡ್ಯೂಲ್ಡ್‌ನಡಿ ತಿದ್ದುಪಡಿ ತಂದು ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಈ ಕೆಲಸವಾಗಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆ ಸನಿಹವಿದ್ದಾಗ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಿದರಾದರೂ ಅನುಷ್ಠಾನ ವಿಚಾರದಲ್ಲಿ ಯಾವುದೇ ಕಾಳಜಿ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.

ಒಳ ಮೀಸಲಾತಿ ಅನುಷ್ಠಾನ ವಿಚಾರದಲ್ಲಿ ತಳ ಸಮುದಾಯಗಳಲ್ಲಿ ಸಂಘರ್ಷ ಉಂಟಾಗಿದ್ದು, ಸೌಹಾರ್ದಯುತ ಹಾಗೂ ಸಾಮರಸ್ಯದಿಂದ ಬಾಳುವಂತಾಗಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರದಲ್ಲಿ ಪೂರಕ ನಿರ್ಧಾರ ಕೈಗೊಳ್ಳಬೇಕು ಹಾಗೂ ಒಳ ಮೀಸಲಾತಿ ವೇಳೆ ಅಲೆಮಾರಿ ಸಮುದಾಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಬೇಕು. ನ್ಯಾ. ಎಚ್.ಎಸ್. ನಾಗಮೋಹನ್ ದಾಸ್ ಆಯೋಗ ಶಿಫಾರಸು ಮಾಡಿದ ಪ್ರಕಾರ ಪರಿಶಿಷ್ಟ ಜಾತಿ ಅಲೆಮಾರಿ. ಅರೆ ಅಲೆಮಾರಿ ಜಾತಿಗಳಿಗೆ ಪರಿಶಿಷ್ಟ ಜಾತಿ ಮೀಸಲಾತಿ ಶೇ. 17ರ ಪೈಕಿ ಪ್ರತ್ಯೇಕವಾಗಿ ಶೇ. 1ರಷ್ಟು ಮೀಸಲಾತಿ ಕಲ್ಪಿಸಿ, ಪ್ರತ್ಯೇಕವಾಗಿ ನೂತನ ಆದೇಶವನ್ನು ಹೊರಡಿಸಬೇಕು. ಶೇ. 56 ಮೀಸಲಾತಿ ಏರಿಕೆಯನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರವು ಆಗ್ರಹಿಸಬೇಕಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎಲ್ಲ ಸಂಸದರ ನಿಯೋಗ ಕರೆದುಕೊಂಡು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ, ಒಳ ಮೀಸಲಾತಿ ಜಾರಿಯ ತೊಡಕುಗಳ ನಿವಾರಣೆಗೆ ಕ್ರಮ ವಹಿಸಬೇಕು. ತಮಿಳುನಾಡು ಹಾಗೂ ಜಾರ್ಖಂಡ್ ಮುಖ್ಯಮಂತ್ರಿಗಳು ಮೀಸಲಾತಿ ಜಾರಿ ವಿಚಾರದಲ್ಲಿ ಯಶಸ್ವಿಯಾಗಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರವೂ ಶೋಷಿತ ಸಮುದಾಯಗಳ ಹಿತ ಕಾಯಲು ಪೂರಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ನಮ್ಮ ಹೋರಾಟ ನಿರಂತರವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ಸೂಕ್ತ ಕ್ರಮ ವಹಿಸುವ ವಿಶ್ವಾಸದಲ್ಲಿದ್ದೇವೆ. ಉಪ ಚುನಾವಣೆ ಬಳಿಕ ಜಾರಿಗೆ ನಿರ್ಲಕ್ಷ್ಯ ವಹಿಸಿದರೆ ಹೋರಾಟವನ್ನು ಮತ್ತೆ ಆರಂಭಿಸಲಾಗುವುದು ಎಂದು ಎಂ. ಗುರುಮೂರ್ತಿ ಶಿವಮೊಗ್ಗ ಎಚ್ಚರಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶ್ರೀಧರ ಕಲಿವೀರ, ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಹಾಗೂ ಜಿಲ್ಲಾ ಸಂಚಾಲಕ ಗೋವರ್ಧನ್ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಗಡಿಯಲ್ಲಿ ಸಂಭ್ರಮದ ಶೇಷಾಚಲ ಸದ್ಗುರುಗಳ ರಥೋತ್ಸವ
ರಾಜ್ಯಪಾಲರ ಕರ್ನಾಟಕ ವಿರೋಧಿ ಧೋರಣೆ ಖಂಡಿಸಿ ಕರವೇ ಪ್ರತಿಭಟನೆ