ಕನ್ನಡಪ್ರಭ ವಾರ್ತೆ ಗೋಕರ್ಣ
ಮುಂಜಾನೆ ಕಾರವಾರ, ಅಂಕೋಲಾಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅನುಕೂಲವಾಗುವ ಸಮಯವಾದ ೮ ಗಂಟೆಗೆ ಈ ಮಾರ್ಗದಲ್ಲಿ ಬಸ್ ಅವಶ್ಯಕತೆ ಇತ್ತು. ಆದರೆ ಇದರ ಬದಲಾಗಿ ೯.೪೫ಕ್ಕೆ ಇಡಲಾಗಿದೆ. ಮಧ್ಯಾಹ್ನ ಒಂದು ಬಸ್ ಮಾತ್ರ ಸಂಚರಿಸುತ್ತಿದ್ದು, ಸಂಜೆ ವೇಳೆ ಮಾರ್ಗದಲ್ಲಿ ಬಸ್ ಸಂಚರಿಸುತ್ತಿಲ್ಲ. ಶಿರೂರು ಮೂಲಕ ಮಾದನಗೇರಿಯಿಂದ ಸುತ್ತುವರಿದು ಬರುವ ಬಸ್ ಕಾಯ್ದು ಪ್ರಯಾಣಿಕರು ಪ್ರಯಾಸದ ಪ್ರಯಾಣ ಮಾಡುವುದು ಮುಂದುವರಿದಿದ್ದು, ನೂತನ ಸೇತುವೆಯಿಂದ ಹತ್ತಿರದ ಮಾರ್ಗವಾದರೂ ಜನ ಸಾಮಾನ್ಯರ ಬಸ್ ಸಂಚಾರದ ವ್ಯವಸ್ಥೆ ಸಮರ್ಪಕವಾಗದೆ ತೊಂದರೆ ಪಡುವಂತಾಗಿದೆ. ಬೇಕಿದೆ ಸಮನ್ವಯತೆ:
ಹೊಸ ಮಾರ್ಗದಲ್ಲಿ ವಾಹನಗಳ ಸಂಚಾರ ಆರಂಭಿಸಿದ ಬಳಿಕ ರಸ್ತೆಯ ಅಂಚಿನ ಗಿಡಗಂಟೆ ಸ್ವಚ್ಛಗೊಳಿಸುವುದು, ಇಕ್ಕಟ್ಟಾದ ಜಾಗದಲ್ಲಿನ ಸಮಸ್ಯೆ, ಜನರಿಗೆ ಅನುಕೂಲವಾಗುವ ಸಮಯದಲ್ಲಿ ಬಸ್ ಬಿಡುವುದು ಸೇರಿ ವಿವಿಧ ವಿಷಯವನ್ನ ರಸ್ತೆ ಸಾರಿಗೆ ಸಂಸ್ಥೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಯವರು ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಬಹುದಿತ್ತು ಎಂಬುದು ಜನರ ಅಭಿಪ್ರಾಯವಾಗಿದೆ. ಆದರೆ ಈ ಸಮನ್ವಯತೆಯ ಸಭೆಯ ನಡೆಯದ ಕಾರಣ ಎಲ್ಲವು ಅಸ್ತವ್ಯಸ್ತವಾಗುತ್ತಿದ್ದು, ಈ ಮಾರ್ಗದ ಹಲವು ಕಡೆ ಮರ, ಗಿಡಗಳು ರಸ್ತೆಗೆ ಬಂದಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಅಪಾಯಕಾರಿ ತಿರುವಿನಲ್ಲಿ ಸೂಚನಾ ಫಲಕ ಮತ್ತಿತರ ಮುನ್ನೆಚ್ಚರಿಕೆ ಫಲಕ ಸಹ ಅಳವಡಿಸದೆ ಬಿಡಲಾಗಿದೆ. ಈ ಮಾರ್ಗದಲ್ಲಿ ಯಾವ ಸಮಯಕ್ಕೆ ಬಸ್ ಅವಶ್ಯಕತೆ ಇದೆ ಎಂಬುದನ್ನ ಈ ಭಾಗದ ಜನರಿಂದ ಅಹವಾಲು ಪಡೆಯುವ ಕಾರ್ಯ ಆಗಿಲ್ಲ.ವಿಜಯಪುರ ಬಸ್ ಸಂಚಾರ ಸ್ಥಗಿತ:ಕುಮಟಾದಿಂದ ಸಂಜೆ ೬ ಗಂಟೆಗೆ ಹೊರಟು ೬.೪೫ಕ್ಕೆ ಇಲ್ಲಿಗೆ ಬಂದ ಏಳು ಗಂಟೆಗೆ ಗಂಗಾವಳಿ ಮಾರ್ಗವಾಗಿ ಅಂಕೋಲಾ- ವಿಜಯಪುರ ತೆರಳುವ ಕುಮಟಾ-ಗೋಕರ್ಣ -ವಿಜಯಪುರ ಬಸ್‌ನ್ನ ಕಳೆದ ಮೂರು ದಿನಗಳಿಂದ ಬಂದ್ ಮಾಡಲಾಗಿದೆ. ಇದರಿಂದ ಅಂಕೋಲಾಕ್ಕೆ ತೆಳಲು ಸಂಜೆ ವೇಳೆ ಬಸ್ ಇಲ್ಲವಾಗಿದ್ದು, ಪ್ರವಾಸಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಕೋಲಾ ಘಟಕದಿಂದಲಾದರೂ ಸಂಜೆ ವೇಳೆ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ.