ಟ್ರಾನ್ಸ್‌ಜೆಂಡರ್ ಮಸೂದೆ 2026 ತಿರಸ್ಕರಿಸಲು ಒತ್ತಾಯ

KannadaprabhaNewsNetwork |  
Published : Mar 31, 2026, 01:15 AM IST
ಸಿಕೆಬಿ-1 ನಗರದ ಖಾಸಗಿ ಬಸ್‌ನಿಲ್ದಾಣದ ಬಳಿ ನಡೆದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ 2026ರ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳಮುಖಿಯರು ಸಹಿ ಸಂಗ್ರಹದ ಮೂಲಕ ಒತ್ತಾಯ ಮಾಡಿದರು | Kannada Prabha

ಸಾರಾಂಶ

ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ 2019ಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಸಂಬಂಧ ಲೋಕಸಭೆ, ರಾಜ್ಯ ಸಭೆಯಲ್ಲಿ ಮಸೂದೆ ಅಂಗೀಕಾರವೂ ಆಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್‌ಜೆಂಡರ್ 2026 ರ ಮಸೂದೆಯನ್ನು ಈ ಕೂಡಲೇ ವಾಪಸ್ಸು ಪಡೆಯಬೇಕು. ಸದರಿ ಕಾಯ್ದೆಯು ಟ್ರಾನ್ಸ್ ಜೆಂಡರ್ ಸಮುದಾಯದ ವೈಯಕ್ತಿಕ ಹಕ್ಕು, ಘನತೆಯ ಬದುಕು ಮತ್ತು ಗುರುತನ್ನು ಸಮರ್ಪಕವಾಗಿ ರಕ್ಷಿಸುವಲ್ಲಿ ವಿಫಲವಾಗಲಿದೆ ಎಂದು ತೃತೀಯ ಲಿಂಗಿಗಳ ನಾಯಕಿ ಕೃತಿಕಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ನಗರದ ಖಾಸಗಿ ಬಸ್‌ನಿಲ್ದಾಣದ ಬಳಿ ಏರ್ಪಡಿಸಿದ್ದ 2026ರ ಕಾಯ್ದೆಯ ವಿರುದ್ಧದ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರ ಕಾಯ್ದೆ 2019ಕ್ಕೆ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಸಂಬಂಧ ಲೋಕಸಭೆ, ರಾಜ್ಯ ಸಭೆಯಲ್ಲಿ ಮಸೂದೆ ಅಂಗೀಕಾರವೂ ಆಗಿದೆ. ನಿಜವಾದ ಸಂತ್ರಸ್ತರಿಗೆ ಕಾನೂನಿನ ನೆರವು ಸಿಗುವಂತೆ ಮಾಡುವ ಉದ್ದೇಶದಿಂದ ಮಸೂದೆ ರೂಪಿಸಲಾಗಿದೆ ಎಂದು ಕೇಂದ್ರ ಹೇಳಿದೆ. ಆದರೆ ಲಿಂಗತ್ವ ಅಲ್ಪಸಂಖ್ಯಾತರು ಯಾರು ಎಂಬುದನ್ನು ಸಂಕುಚಿತವಾಗಿ ವ್ಯಾಖ್ಯಾನಿಸಲಾಗಿದೆ. ಅವರ ಲಿಂಗತ್ವದ ಗುರುತಿನ ಸ್ವಯಂಘೋಷಣೆ ಮತ್ತು ಇತರೆ ಹಕ್ಕುಗಳನ್ನು ಮೊಟಕುಗೊಳಿಸುವಂತಹ ಅಂಶಗಳು ಮಸೂದೆಯಲ್ಲಿವೆ ಎಂದು ಸಂಘಟನೆ ಮುಖಂಡರಾದ ವೆಂಕಟರೆಡ್ಡಿ, ಇಬ್ರಾಹಿಂ, ರಾಧಿಕಾ, ಮಮತಾ, ಮೌಲಾ, ರಾಜು ಆರೋಪಿಸಿದರು.

2026 ರ ತಿದ್ದುಪಡಿ ಮಸೂದೆಯು ಹಿಜ್ರಾ, ಕಿನ್ನರ್, ಮಂಗಳಮುಖಿ, ತಿರುನಂಬಿ, ನುಪಿಮಾನ್ಬಿ, ಕೋಥಿ, ಶಿವಶಕ್ತಿ, ಜೋಗಿನಿ, ಮರುಳಾಡಿ, ಯೆಜ್ಜೋಡು, ಮತ್ತು ಧುರಾನಿ ಮುಂತಾದ ಟ್ರಾನ್ಸ್ ಜೆಂಡರ್ ಮಹಿಳೆಯರು, ಟ್ರಾನ್ಸ್‌ಜೆಂಡರ್‌ಗಳು, ಇಂಟರ್‌ಸೆಕ್ಸ್ ಮತ್ತು ಲಿಂಗ ವೈವಿಧ್ಯಮಯ ಸಮುದಾಯದ ಹಿತಾಸಕ್ತಿಗಾಗಿ ಕೇಂದ್ರ ಈ ಕೂಡಲೇ 2026ರ ಮಸೂದೆ ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ವರ್ಸಸ್ ಭಾರತ ಒಕ್ಕೂಟ ಎನ್‌ಎಲ್‌ಎಸ್‌ಎ-2026 ರ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಲಿಂಗ ಗುರುತಿನ ಕಾನೂನು ಮಾನ್ಯತೆಯನ್ನು ಜೈವಿಕ ಸಂಗತಿಗಳಿಗಿಂತ ವ್ಯಕ್ತಿಯ ಸ್ವಯಂ ಗ್ರಹಿಕೆಯೇ ಆಧಾರವಾಗಿತ್ತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ವೀರೇಂದ್ರ ಕುಮಾರ್ ಅವರು ಮಾ.12ರಂದು ಲೋಕಸಭೆಯಲ್ಲಿ ಮಂಡಿಸಿದ ಟ್ರಾನ್ಸ್ಜೆಂಡರ್ ವ್ಯಕ್ತಿಗಳ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆ-2026 ತಮ್ಮದೇ ಆದ ತಪ್ಪಿಲ್ಲದೆ ಮತ್ತು ತಮ್ಮದೇ ಆದ ಆಯ್ಕೆಯಿಲ್ಲದೆ ಜೈವಿಕ ಕಾರಣಗಳಿಂದ ತೀವ್ರ ಸಾಮಾಜಿಕ ಬಹಿಷ್ಕಾರವನ್ನು ಎದುರಿಸುವವರನ್ನು ಮಾತ್ರ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ದೂರಿದರು.

ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಕಾರ್ಯದರ್ಶಿ ಶಿಲ್ಪಾ ಮಾತನಾಡಿ, ಆದರೆ 2019ರ ಕಾಯ್ದೆಯಲ್ಲಿನ ಕೆಲವು ವಿಚಾರಗಳಲ್ಲಿ ಗೊಂದಲಗಳಿವೆ. ಅವು ಕಾಯ್ದೆ ಜಾರಿ ಮಾಡಲು ಅಡ್ಡಿಯಾಗಿವೆ. ಲಿಂಗತ್ವ ಅಲ್ಪ ಸಂಖ್ಯಾತರೆಂದರೆ ಯಾರು? ಅವರನ್ನು ಹೇಗೆ ಗುರುತಿಸಲಾಗುತ್ತಿದೆ ಎನ್ನುವ ಅಂಶಗಳೇ 2026 ರ ಕಾಯ್ದೆ ಜಾರಿಯಲ್ಲಿ ನಿರ್ಣಾಯಕವಾಗಿವೆ ಎನ್ನುವ ಕೇಂದ್ರ ಸರ್ಕಾರ ಈ ಅಂಶಗಳನ್ನು ೨೦೨೬ರ ಮಸೂದೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರ ವಿರುದ್ಧ ಸಿಡಿದೆದ್ದಿರುವ ಟ್ರಾನ್ಸ್ ಜೆಂಡರ್ ಸಮೂಹ ೨೦೨೬ರ ಮಸೂದೆಯು ಗಂಭೀರವಾದ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಆತಂಕವನ್ನು ಹುಟ್ಟು ಹಾಕಿದೆ. ಇದು ನಮ್ಮ ಗುರುತುಗಳನ್ನು ಅಳಿಸಿ ಹಾಕುವ ಅಪಾಯದಿಂದ ಕೂಡಿದೆ. ಮೇಲಾಗಿ ವೈವಿಧ್ಯಮಯವಾದ ಲಿಂಗಗುರುತುಗಳ ಜೀವಂತ ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ದೂರಿದರು.

ಕೆವಿಎಸ್ ಸಂಘಟನೆಯ ಉಷಾಕಿರಣ್ ಮಾತನಾಡಿ, 2019ರ ಕಾಯ್ದೆಯು ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಲಿಂಗತ್ವದ ಗ್ರಹಿಕೆಯ ಆಧಾರ ಮೇಲೆ ಲಿಂಗತ್ವ ಅಲ್ಪಸಂಖ್ಯಾತರೆಂದು ಸ್ವಯಂ ಗುರುತಿಸಿಕೊಳ್ಳಲು 2019ರ ಕಾಯ್ದೆ ಸೆಕ್ಷನ್ 4(2)ರಂತೆ ಅವಕಾಶ ಕಲ್ಪಿಸಿತ್ತು.2026 ರ ಮಸೂದೆಯಲ್ಲಿ ಇದನ್ನು ಕೈಬಿಡಲಾಗಿದೆ.ಈ ಮಸೂದೆಯಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರೆಂದರೆ ಯಾರು ಎಂಬುದನ್ನು ಸೀಮಿತವಾಗಿ ವ್ಯಾಖ್ಯಾನಿಸಲಾಗಿದೆ ಇದು ತಪ್ಪು.2019ರ ಕಾಯ್ದೆ ಪ್ರಕಾರ ಜಿಲ್ಲಾಧಿಕಾರಿಗಳು ಲಿಂಗತ್ವ ಅಲ್ಪಸಂಖ್ಯಾತರೆಂದು ಪ್ರಮಾಣ ಪತ್ರ ಕೊಡುತ್ತಿದ್ದರು.ಆದರೆ ಹೊಸ ತಿದ್ದುಪಡಿ ಮಸೂದೆ ಪ್ರಕಾರ ಗುರುತಿನ ಚೀಟಿ ನೀಡಲು ವೈದ್ಯಕೀಯ ಮಂಡಳಿ ತಪಾಸಣೆಗೆ ಮಾಡುತ್ತದೆ. ಅದರ ಆಧಾರದಲ್ಲಿ ಸರಕಾರಕ್ಕೆ ಶಿಫಾರಸ್ಸು ಮಾಡುತ್ತದೆ.ಜತೆಗೆ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಯು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ದೃಢೀಕರಿಸುವ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಸೆಕ್ಷನ್ 5 (1) ಎ ಪ್ರಕಾರ ಅವುಗಳನ್ನು ಪರಿಶೀಲಿಸಿ ವ್ಯಕ್ತಿಗೆ ಗುರುತಿನ ಚೀಟಿ ನೀಡಬೇಕೆ ಬೇಡವೆ ಎನ್ನುವ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ 100ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವರು ಭಾಗಿಯಾಗಿ ಸಹಿ ಸಂಗ್ರಹ ಮಾಡಿ ರಾಷ್ಟ್ರಪತಿಗಳಿಗೆ ಕಳಿಸಿಕೊಡುವ ಕೆಲಸ ಮಾಡಿದರು. ಸಹಿ ಸಂಗ್ರಹದ ಅಭಿಯಾನದಲ್ಲಿ ಹಳ್ಳಿ ಮಕ್ಕಳ ಸಂಘದ ವೆಂಕಟರಮಣಪ್ಪ, ಭೂಮಿ ಹಕ್ಕು ಸಂಘಟನೆ ಮುಖಂಡರು, ವಿಶೇಷ ಚೇತನ ಸಂಘದ ಮುಖಂಡರು ಭಾಗಿಯಾಗಿದ್ದರು.ಸಿಕೆಬಿ-1 ನಗರದ ಖಾಸಗಿ ಬಸ್‌ನಿಲ್ದಾಣದ ಬಳಿ ನಡೆದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ 2026ರ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳಮುಖಿಯರು ಸಹಿ ಸಂಗ್ರಹದ ಮೂಲಕ ಒತ್ತಾಯ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

೪೩೪೦೦ ಕೋಟಿ ರು. ಮೀಸಲು: ಟಿ.ಬಿ.ಜಯಚಂದ್ರ
ಮಹಾವೀರರ ತತ್ವಗಳಿಂದ ಉದ್ವಿಗ್ನತೆ ಶಮನ