ಕೆರೆಗೋಡಿ-ರಂಗಾಪುರ ರಸ್ತೆ ದುರಸ್ಥಿಗೊಳಿಸಲು ಆಗ್ರಹ

KannadaprabhaNewsNetwork | Published : Jun 7, 2024 12:30 AM

ಸಾರಾಂಶ

ನಗರದ ಹಾಸನ ರಸ್ತೆಯಿಂದ ಅನಗೊಂಡನಹಳ್ಳಿ ಮಾರ್ಗವಾಗಿ ಕೆರೆಗೋಡಿ-ರಂಗಾಪುರ, ದಸರೀಘಟ್ಟ ಮೂಲಕ ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಸಂಚಾರ ತೊಂದರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಹಾಸನ ರಸ್ತೆಯಿಂದ ಅನಗೊಂಡನಹಳ್ಳಿ ಮಾರ್ಗವಾಗಿ ಕೆರೆಗೋಡಿ-ರಂಗಾಪುರ, ದಸರೀಘಟ್ಟ ಮೂಲಕ ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಸಂಚಾರ ತೊಂದರೆಯಾಗುತ್ತಿದೆ. ಜನಪ್ರತಿನಿಧಿ, ಅಧಿಕಾರಿ ಈ ರಸ್ತೆಯನ್ನು ದುರಸ್ಥಿಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ವಿಶ್ವಪ್ರಸಿದ್ದ ಎಪಿಎಂಸಿ ಮಾರುಕಟ್ಟೆಗೂ ಹಾಸನ ರಸ್ತೆ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಆಗಿದ್ದು, ಈ ರಸ್ತೆ ಬಹಳಷ್ಟು ಕಡೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ಸವಾರರು ಹರಸಾಹಸಪಟ್ಟು ವಾಹನ ಚಲಾಯಿಸಬೇಕಾಗಿದೆ. ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತಿರುವುದರಿಂದ ಪ್ರತಿನಿತ್ಯ ಒಂದಲ್ಲೊಂದು ಅವಘಡ, ಅಪಘಾತಗಳು ಸಂಭವಿಸುತ್ತಿವೆ. ಮಳೆ ಬಂದರಂತೂ ಕೆಸರು ಗದ್ದೆಯಾಗಿ ಬಿಡುತ್ತದೆ.

ಈ ಕ್ಷೇತ್ರಗಳಿಗೆ ಗಾಂಧಿನಗರ ಕಡೆಯಿಂದ ಹೋಗುವ ಮುಖ್ಯ ರಸ್ತೆಯು ಯುಜಿಡಿ ಕಾಮಗಾರಿಯಿಂದಾಗಿ ಕೆಸರು ಗದ್ದೆಯಂತಾಗಿದೆ. ವಾಹನ ಸವಾರರು ಈ ಅನಗೊಂಡನಹಳ್ಳಿ ರಸ್ತೆಯಲ್ಲಿಯೇ ಸಂಚರಿಸುವುದರಿಂದ ಪ್ರತಿನಿತ್ಯ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ರಸ್ತೆಯ ಎರಡೂ ಅಂಚಿನಲ್ಲಿ ಗಿಡ ಬೆಳೆದು ರಸ್ತೆಯನ್ನೆ ಆಕ್ರಮಿಸಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಾತ್ರಿ ಸಂಚರಿಸುವ ಸವಾರರು ಚಿರತೆ ಭಯಕ್ಕೆ ಹೆದರುತ್ತಿದ್ದು, ಜನಪ್ರತಿನಿಧಿ, ಅಧಿಕಾರಿ ಗಮನ ಹರಿಸದಿರುವುದರಿಂದ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ರಸ್ತೆಯನ್ನು ಡಾಂಬರೀಕರಣಗೊಳಿಸಿ, ಅಕ್ಕಪಕ್ಕದಲ್ಲಿ ಬೆಳೆದುಕೊಂಡಿರುವ ಮುಳ್ಳು ಬೇಲಿ ತೆರವುಗೊಳಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಾಹನ ಸವಾರರ ಒತ್ತಾಯವಾಗಿದೆ.

ಚೆನ್ನಾಗಿದ್ದ ಡಾಂಬರನ್ನು ಕಿತ್ತು ರಸ್ತೆಯನ್ನು ಹಾಳು ಮಾಡಲಾಗಿದೆ. ಕಳೆದ ಒಂದು ವರ್ಷದ ಹಿಂದಿನಿಂದಲೂ ಹಾಳಾಗಿರುವ ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗಿದ್ದು, ಶಾಸಕರು, ಅಧಿಕಾರಿ ಕೂಡಲೇ ಈ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಡಾಂಬರೀಕರಣಗೊಳಿಸಬೇಕು.ದೇವರಾಜು, ಸ್ಥಳೀಯ ಕೆರೆಗೋಡಿ.ಕಳೆದ ವರ್ಷದ ಅಂದಾಜು ಪಟ್ಟಿಯಲ್ಲಿ ರಸ್ತೆ ಕಾಮಗಾರಿ ಬಗ್ಗೆ ಸೇರಿಸಲಾಗಿತ್ತಾದರೂ ಅನುದಾನದ ಕೊರತೆಯಿಂದ ಆಗಲಿಲ್ಲ. ಈ ವರ್ಷದ ಅಂದಾಜು ಪಟ್ಟಿಯಲ್ಲಿ ಸೇರಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸಲಾಗುತ್ತದೆ.ಸುಹಾಸ್, ಎಇ, ಜಿಲ್ಲಾ ಪಂಚಾಯಿತಿ ತುಮಕೂರು

Share this article