ರಮಜಾನ್ ಸಮಯದಲ್ಲಿ ವಿದ್ಯುತ್ ಕಡಿತ ನಿಲುಗಡೆಗೆ ಆಗ್ರಹ

KannadaprabhaNewsNetwork |  
Published : Mar 22, 2025, 02:02 AM IST
ಪೊಟೋ ಪೈಲ್ : 21ಬಿಕೆಲ್1 | Kannada Prabha

ಸಾರಾಂಶ

ರಮಜಾನ್ ಉಪವಾಸದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುವುದರಿಂದ ತೊಂದರೆಯಾಗುತ್ತಿದೆ.

ಭಟ್ಕಳ: ರಮಜಾನ್ ಉಪವಾಸದ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡುವುದರಿಂದ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಮನ ಹರಿಸಿ ವಿದ್ಯುತ್ ಕಡಿತ ನಿಲ್ಲಿಸಬೇಕೆಂದು ಇಲ್ಲಿನ ಮಜ್ಲಿಸೆ ಇಸ್ಲಾಹ್‌ ವ ತಂಝೀಂ ನಿಯೋಗ ಹೆಸ್ಕಾಂ ಸಹಾಯಕ ಅಭಿಯಂತರರನ್ನು ಭೇಟಿಯಾಗಿ ಆಗ್ರಹಿಸಿತು.

ನಿಯೋಗದಲ್ಲಿದ್ದ ತಂಜೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಹೆಸ್ಕಾಂ ವತಿಯಿಂದ ರಮಜಾನ್ ಮತ್ತು ಮುಸ್ಲಿಂ ಹಬ್ಬಗಳ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಲಾಗುತ್ತಿದೆ ಎಂಬ ಆರೋಪ ಇದೆ. ವಿಶೇಷವಾಗಿ ರಮಜಾನ್ ಸಮಯದಲ್ಲಿ ರಾತ್ರಿ ಹೊತ್ತು ಮತ್ತು ಬೆಳಗಿನಜಾವ ಹೆಚ್ಚು ಎಚ್ಚರವಾಗಿರುವ ಸಮಯವಾಗಿದ್ದು ಆ ಸಮಯದಲ್ಲಿಯೇ ವಿದ್ಯುತ್ ವ್ಯತ್ಯಯವಾದಲ್ಲಿ ತೀವ್ರ ತೊಂದರೆ ಆಗುತ್ತಿದೆ ಎಂದರು.

ಇದನ್ನು ನಿರಾಕರಿಸಿದ ಅಭಿಯಂತರ ಮಂಜುನಾಥ, ಅಂತಹ ಉದ್ದೇಶ ಇಲಾಖೆಗೆ ಯಾವತ್ತೂ ಇಲ್ಲ. ಒಂದು ಗಂಟೆ ವಿದ್ಯುತ್ ಕಡಿತಗೊಳಿಸುವುದರಿಂದ ಕಂಪನಿಗೆ ಸುಮಾರು ₹೧೦ ಲಕ್ಷ ನಷ್ಟವಾಗುತ್ತದೆ. ಕಂಪೆನಿ ಎಂದೂ ನಷ್ಟ ಮಾಡಿಕೊಳ್ಳಲು ಬಯಸುವುದಿಲ್ಲ. ಹೆಚ್ಚಿನ ವಿದ್ಯುತ್ ಬಳಕೆ ಮಾಡಿದಾಗ ಟ್ರಾನ್ಸಫಾರ್ಮರ್ ಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ಓವರ್‌ಲೋಡ್ ಆಗಿ ವೈಫಲ್ಯಕ್ಕೆ ಕಾರಣವಾಗುತ್ತದೆ. ಇನ್ನು ಮುಖ್ಯಲೈನ್‌ನಲ್ಲಿ ದೋಷ ಬಂದರೆ ವಿದ್ಯುತ್ ನಿಲುಗಡೆಯಾಗುತ್ತದೆಯೇ ವಿನಃ ಯಾವುದೇ ಕಡಿತ ಮಾಡುವುದಿಲ್ಲ ಎಂದರು.

ತಾತ್ಕಾಲಿಕ ಪರಿಹಾರವಾಗಿ ಇತ್ತೀಚೆಗೆ ಹೊಸ ೫೦೦೦ ಕೆವಿಎ ಟ್ರಾನ್ಸಫಾರ್ಮರ್ ಸ್ಥಾಪಿಸಲಾಗಿದೆ. ರಮಜಾನ್ ಸಮಯದಲ್ಲಿ ವಿದ್ಯುತ್ ವೈಫಲ್ಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದರು.

ಭಟ್ಕಳದಿಂದ ಹೆಸ್ಕಾಂ ತಿಂಗಳಿಗೆ ಸುಮಾರು ₹೧೦ ಕೋಟಿ ಆದಾಯ ಗಳಿಸುತ್ತಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕಿಗಿಂತ ಅತಿ ಹೆಚ್ಚು ಆದಾಯವಾಗಿದೆ. ಭಟ್ಕಳದ ವಿದ್ಯುತ್ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ದೀರ್ಘಾವಧಿಯ ಯೋಜನೆ ಅಗತ್ಯವಾಗಿದೆ ಎಂದ ಅವರು, ೧೧೦ ಕೆವಿ ವಿದ್ಯುತ್ ಮಾರ್ಗದ ಅಳವಡಿಕೆ ಭಟ್ಕಳಕ್ಕೆ ತುರ್ತು ಅಗತ್ಯವಾಗಿದೆ. ಅದನ್ನು ಬೈಂದೂರು ಗ್ರಿಡ್‌ಗೆ ಸಂಪರ್ಕಿಸುವುದರಿಂದ ನಡೆಯುತ್ತಿರುವ ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುತ್ತದೆ. ಸಾಗರ ರಸ್ತೆಯಲ್ಲಿ 110 ಕೆವಿ ವಿದ್ಯುತ್ ಸರಬರಾಜು ಘಟಕದ ಕಾಮಗಾರಿ ನಡೆಯುತ್ತಿದ್ದು, ಇದು ಶೀಘ್ರದಲ್ಲಿ ಮುಗಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು.

ತಂಝೀಂ ನಿಯೋಗ ಹೆಬಳೆಯ ಗ್ರಿಡ್ ಗೂ ಕೂಡ ಭೇಟಿ ನೀಡಿ ವಿವರ ಪಡೆಯಿತು. ತಂಝೀಂ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಖೀಬ್ ಎಂ.ಜೆ. ನದ್ವಿ, ಜೈಲಾನಿ ಶಾಬಂದ್ರಿ, ಅಜೀಜುರ್ ರೆಹಮಾನ್ ರುಕ್ನುದ್ದೀನ್ ನದ್ವಿ ಉಪಸ್ಥಿತರಿದ್ದರು.

ಹೆಸ್ಕಾಂ ಸಹಾಯಕ ಅಭಿಯಂತರ ಮಂಜುನಾಥ ಅವರನ್ನು ಭೇಟಿ ಮಾಡಿದ ಭಟ್ಕಳ ತಂಝೀಂ ನಿಯೋಗ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚಿಸಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ