ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಮಳವಳ್ಳಿಗೆ ತೆರಳುವ ಸಾರಿಗೆ ಬಸ್ಸುಗಳು ಕೆ.ಎಂ.ದೊಡ್ಡಿಯಿಂದ ೮ ಕಿ.ಮೀ. ದೂರವಿರುವ ಮಳವಳ್ಳಿ ತಾಲೂಕಿನ ಕಾಗೇಪುರದ ಬಳಿ ನಿಲುಗಡೆ ಮಾಡುತ್ತಿರಲಿಲ್ಲ. ಬಸ್ಸಿನಲ್ಲಿ ಬರುವ ಮಹಿಳೆಯರು, ಹೆಣ್ಣು ಮಕ್ಕಳು ಕೆ.ಎಂ.ದೊಡ್ಡಿ ಅಥವಾ ಮಳವಳ್ಳಿಯಲ್ಲಿ ಇಳಿದುಕೊಂಡು ಬೇರೆ ವಾಹನಗಳ ಮೂಲಕ ಊರಿಗೆ ಬರಬೇಕಿತ್ತು. ರಾತ್ರಿ ವೇಳೆ ಹೆಣ್ಣು ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿತ್ತು.
ಕಾಗೇಪುರ ಸುತ್ತಮುತ್ತ ೧೪ ಊರುಗಳಿವೆ. ಈ ಊರುಗಳಿಂದ ವಿದ್ಯಾಭ್ಯಾಸ, ಉದ್ಯೋಗಕ್ಕೆ ಮಹಿಳೆಯರು ಹೊರಗೆ ಹೋಗುತ್ತಿದ್ದು, ಸ್ಟೇಜ್ ಇಲ್ಲವೆಂಬ ಕಾರಣಕ್ಕೆ ಸಾರಿಗೆ ಬಸ್‌ಗಳು ಅಲ್ಲಿ ನಿಲುಗಡೆಯಾಗುತ್ತಿರಲಿಲ್ಲ. ಬಸ್‌ಗಳ ನಿಲುಗಡೆಯಿಲ್ಲದೆ ಹೆಣ್ಣುಮಕ್ಕಳು, ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದರು. ಈ ವಿಷಯವನ್ನು ತಳಗವಾದಿಯ ಚಿಕ್ಕಣ್ಣ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರ ವಿಚಾರಣೆ ನಡೆಸಿ ಕಾಗೇಪುರದಲ್ಲಿ ಸಾರಿಗೆ ಬಸ್ಸುಗಳನ್ನು ನಿಲುಗಡೆ ಮಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಅದಕ್ಕೆ ಅಧಿಕಾರಿಗಳೂ ಒಪ್ಪಿಗೆ ಸೂಚಿಸಿದರು.ಮತ್ತೊಂದು ಪ್ರಕಣದಲ್ಲಿ ಮಂಡ್ಯ ತಾಲೂಕು ಬಸರಾಳು ಹೋಬಳಿಯ ಧರಣಿಗೆರೆಯಲ್ಲಿ ಜಮೀನುಗಳಿಗೆ ಹೋಗಲು ರಸ್ತೆ ಇರಲಿಲ್ಲ. ಪಂಚಾಯಿತಿ ನಕ್ಷೆಯಲ್ಲಿ ೮.೫ ಅಡಿ ರಸ್ತೆ ಇದ್ದರೂ ಜಮೀನನ್ನು ಉತ್ತಿಕೊಂಡು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಮನಗಂಡ ೭೩ ವರ್ಷದ ಸಣ್ಣನಂಜಯ್ಯ ಎಂಬುವರು ೨೦೨೨ರಲ್ಲಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ರಸ್ತೆಯ ಒತ್ತುವರಿಯನ್ನು ತೆರವುಗೊಳಿಸಿದ್ದು. ಆದರೆ, ರಸ್ತೆಯ ಜಾಗದಲ್ಲಿ ೪ ನೀಲಗಿರಿ, ೪ ಅರ್ಕ್ಯುಲೆಸ್ ಮತ್ತು ೨ ತೆಂಗಿನ ಮರಗಳಿದ್ದು ಅವುಗಳನ್ನು ಕಟಾವು ಮಾಡದೆ ಜಮೀನಿನವರು ವಿಳಂಬ ಮಾಡುತ್ತಿದ್ದರು. ಇದರಿಂದ ಸುಮಾರು ೧೫೦ ಜನ ರೈತರಿಗೆ ತೊಂದರೆಯಾಗುತ್ತಿತ್ತು.
ಇಳಿಯ ವಯಸ್ಸಿನಲ್ಲೂ ಹಿರಿಯ ಜೀವಗಳ ಸಾಮಾಜಿಕ ಕಳಕಳಿ, ಊರಿನ ಜನರಿಗೆ ಅನುಕೂಲವಾಗುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರಕ್ಕೆ ಹೋರಾಟ ನಡೆಸಿದ್ದನ್ನು ಉಪ ಲೋಕಾಯುಕ್ತರು ಶ್ಲಾಘಿಸಿದರು.