ಕಜಾಪ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದಿಂದ ಕಡೂರಲ್ಲಿ ನಡೆದ ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಕಡೂರುಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಕಾರಣ ಮಹಿಳೆಯರಿಗೆ ಮತ್ತಷ್ಟು ಜವಾಬ್ದಾರಿ ಬಂದಿದೆ ಎಂದು ಕಜಾಪದ ಜಿಲ್ಲಾ ಅಧ್ಯಕ್ಷೆ ವಿಶಾಲಕ್ಷಮ್ಮ ಹೇಳಿದರು.
ಕನ್ನಡ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದಿಂದ ಕಡೂರಿನ ರೋಟರಿ ಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಹೆಣ್ಣು ಸಾಧನೆ ಹಾದಿಯಲ್ಲಿ ಮೇಲೇರುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ಹಿಂದಿನ ಇತಿಹಾಸ ಗಮನಿಸಿದರೆ ಹೆಣ್ಣು ತನ್ನ ಸತಿ ಧರ್ಮ ಪಾಲನೆಯಲ್ಲಿ ಒನಕೆ ಓಬವ್ವ ತನ್ನ ಪ್ರಾಣವನ್ನೇ ತ್ಯಾಗ ಮಾಡಿದಳು. ತನ್ನ ಪತಿಗೆ ಊಟ ಬಡಿಸುತ್ತಿದ್ದರಿಂದ ತಾನೇ ನಿಂತು ಶತ್ರುಗಳನ್ನು ಸದೆ ಬಡಿದಳು ಎಂದು ಸ್ಮರಿಸಿದರು. ಚಿಕ್ಕಮಗಳೂರು ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ಮಹಿಳಾ ಘಟಕಗಳನ್ನು ದಶಮಾನೋತ್ಸವ ಸಂದರ್ಭದಲ್ಲಿ ಸ್ಥಾಪಿಸಿ ಎಲ್ಲ ಶಾಲಾ ಕಾಲೇಜುಗಳಲ್ಲಿ ಮಹಿಳಾ ತಂಡಗಳಿಗೆ ತರಬೇತಿ ನೀಡಿ ಮಹಿಳಾ ಜಾನಪದ ಜಾಗೃತಿ ಮೂಡಿಸಲಾಗುವುದು ಎಂದರು. ಕಜಾಪ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ಗೌರವಾಧ್ಯಕ್ಷೆ ಸವಿತಾ ಸತ್ಯನಾರಾಯಣ ಮಾತನಾಡಿ, ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಲು ಅವಕಾಶವಿದೆ. ನಿರಂತರವಾಗಿ ಜಿಲ್ಲಾದ್ಯಂತ ಜಾನಪದ ಜಾಗೃತಿ ಮೂಡಿಸುವ ಪ್ರಯತ್ನ ಮಹಿಳಾ ಘಟಕ ಮಾಡಲಿದೆ ಎಂದರು.ಕಡೂರು ತಾಲೂಕಿನ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಶ್ರೀನಿವಾಸ್ ಮಾತನಾಡಿ, ಇಂದಿನ ದಿನಗಳಲ್ಲಿ ಎಲ್ಲ ಶಾಲಾ ಕಾಲೇಜು ಹಂತಗಳಲ್ಲಿ ಜನಪದ ವಿಚಾರ ಸಂಕಿರಣ, ತರಬೇತಿ ಮತ್ತು ಕಾರ್ಯಾಗಾರ ಏರ್ಪಡಿಸ ಲಾಗುವುದು ಮತ್ತು ಶಾಲಾ ಕಾಲೇಜುಗಳಲ್ಲಿ ಮಹಿಳಾ ಘಟಕಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಜ್ಞಾನೇಶ್ವರಿ, ಸವಿತಾ ಸತ್ಯನಾರಾಯಣ್, ಶೋಭಾ ಶ್ರೀನಿವಾಸ್ ರವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಆಯೋಜಿಸಿದ್ದ ಸಂಸ್ಕೃತಿ ಬಿಂಬಿಸುವ ಆಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸುನಿತಾ ಕಿರಣ್, ಲತಾ ರಾಜಶೇಖರ್, ಪುಷ್ಪಾ, ಗಾಯತ್ರಮ್ಮ, ತಿಮ್ಮಕ್ಕ, ಗಾಳಪ್ಪ, ಆಶಾ ನವೀನ್, ಜಾನಪದ ಪರಿಷತ್ತಿನ ಪದಾಧಿಕಾರಿಗಳಾದ ಭಾನುಮತಿ ಮೂಡಿಗೆರೆ, ಸೌಮ್ಯ ವಿಜಯಕುಮಾರ್ ತರೀಕೆರೆ, ಕಲಾ ಮಾಲತೇಶ್, ದಾಕ್ಷಾಯಿಣಿ ಬಾಯಿ, ಮಂಜುಳಾ, ಮಾಲತಿ, ಪದ್ಮಾವತಿ ಶ್ರೀನಿವಾಸ್ ಹಾಗು ಕಡೂರು ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.28ಕೆಕೆಡಿಯು1.
ಕನ್ನಡ ಜಾನಪದ ಪರಿಷತ್ತಿನ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದಿಂದ ಕಡೂರಿನ ರೋಟರಿ ಭವನದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರನ್ನು ಗೌರವಿಸಲಾಯಿತು.