ರಾಜ್ಯ ರೈತಸಂಘದಿಂದ ಬಿಜೆಪಿ ಸೋಲಿಸುವ ಸಂಕಲ್ಪ

KannadaprabhaNewsNetwork |  
Published : Apr 18, 2024, 02:17 AM IST
17ಸಿಎಚ್‌ಎನ್‌58ರಾಜ್ಯ ರೈತಸಂಘ ಬುಧವಾರ ಅಮೃತಭೂಮಿಯ ಪ್ರೊ. ಎಂ ಡಿ ನಂಜುಂಡಸ್ವಾಮಿಯವರ ಸ್ಮಾರಕದ ಮುಂದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೇಸೆಯುವ ಸಂಕಲ್ಪ ಕೈಗೊಳ್ಳಲು ಸಭೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯ ರೈತಸಂಘ ಬುಧವಾರ ಅಮೃತಭೂಮಿಯ ಪ್ರೊ. ಎಂ ಡಿ ನಂಜುಂಡಸ್ವಾಮಿ ಸ್ಮಾರಕದ ಮುಂದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೇಸೆಯುವ ಸಂಕಲ್ಪ ಕೈಗೊಂಡಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ರೈತಸಂಘ ಬುಧವಾರ ಅಮೃತಭೂಮಿಯ ಪ್ರೊ. ಎಂ ಡಿ ನಂಜುಂಡಸ್ವಾಮಿ ಸ್ಮಾರಕದ ಮುಂದೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರೈತ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೇಸೆಯುವ ಸಂಕಲ್ಪ ಕೈಗೊಂಡಿದೆ.

ರಾಜ್ಯಾದ್ಯಂತ ಪ್ರತಿಹಳ್ಳಿಗೆ ದ್ವಿಚಕ್ರ ವಾಹನದ ಮೂಲಕ ತೆರಳಿ ಕರಪತ್ರಗಳನ್ನು ವಿತರಿಸಿ, ಕೇಂದ್ರ ಬಿಜೆಪಿ ಸರ್ಕಾರ 2014 ರಲ್ಲಿ ತಾನು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹಾಗೂ ಸ್ವಾಮಿನಾಥನ್ ವರದಿ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಕೊಡುವ ಆಶ್ವಾಸನೆ ನೀಡಿ ರೈತ ಕುಲಕ್ಕೆ ವಂಚಿಸಿರುವುದನ್ನು ಮನಗಾಣಿಸಿ ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೇಸೆಯಲು ಕರೆ ನೀಡುವ ಸಂಕಲ್ಪ ಮಾಡಿದರು.

ಮೊದಲಿಗೆ ನಡೆದ ಸಭೆಯನ್ನು ಉದ್ಘಾಟಿಸಿದ ಪಂಜಾಬಿನ ಕ್ರಾಂತಿಕಾರಿ ಕಿಸಾನ್ ಯೂನಿಯನ್ ನ ಕಾರ್ಯದರ್ಶಿ ಅವತಾರ್ ಸಿಂಗ್ ಮಹಿಮಾ ಮಾತನಾಡಿ, ಪಂಜಾಬಿನ ರೈತಸಂಘಟಣೆಗಳು ಹತ್ತಾರು ಗುಂಪುಗಳಾಗಿ ಒಡೆದು ಹೋಗಿದ್ದವು. ಬರಿ ಫೋಟೋಗಾಗಿ ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಗಟ್ಟಿ ಹೋರಾಟ ಮಾಡಬೇಕು ಎಂದು ಎಲ್ಲಾ ರೈತಸಂಘಟನೆಗಳನ್ನು ಒಗ್ಗೂಡಿಸಿ ವಿದ್ಯುತ್ ಖಾಸಗೀಕರಣ ವಿರೋಧಿಸಿ 40 ದಿನಗಳ ಚಳುವಳಿಗೆ ಸರ್ಕಾರ ಮಣಿಯಿತು.

ಹೋರಾಟದಲ್ಲಿ 756 ರೈತರು ಪ್ರಾಣಬಿಟ್ಟರು:

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ದೆಹಲಿಯ ಹೊರಭಾಗದಲ್ಲಿ ಸಾವಿರಾರು ರೈತರು ತಿಂಗಳಾನುಗಟ್ಟಲೆ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೇ ನಡೆಸಿದ ಹೋರಾಟದಲ್ಲಿ 756 ರೈತರು ಪ್ರಾಣ ಕಳೆದುಕೊಂಡರು ಸಹ ಧೃತಿಗೆಡಲಿಲ್ಲ.

ಪಂಜಾಬ್‌ನಲ್ಲಿ ಕಮಲ ಅರಳಲ್ಲ:

ಕೊನೆಗೆ ಪಾರ್ಲಿಮೆಂಟ್ ನಲ್ಲಿ ಪಾಸಾದ ಕೃಷಿ ಕಾಯ್ದೆಗಳನ್ನು ಮೋದಿ ರೈತರ ಕ್ಷಮೆ ಕೇಳಿ ಹಿಂದಕ್ಕೆ ಪಡೆಯಬೇಕಾಯಿತು. ರೈತಹೋರಾಟಕ್ಕೆ ಅಂತಹ ಶಕ್ತಿ ಇದೆ. ಈಗಲೂ ಅಂತಹ ಹೋರಾಟ ನಡೆಯುತ್ತಿದೆ. ಪಂಜಾಬಿನಲ್ಲಿ ಬಿಜೆಪಿ ಒಂದು ಸೀಟು ಸಹ ಗಳಿಸುವುದಿಲ್ಲ. ಅಬ್ ಕಿ ಬಾರ್ ಚಾರ್ ಸೌ ಪಾರ್ ಅನ್ನುವುದು ಅವರ ಭ್ರಮೆ. ಕೇರಳ, ತಮಿಳುನಾಡುಗಳಲ್ಲಿ ಅವರಿಗೆ ಒಂದು ಸೀಟು ಬರುವುದಿಲ್ಲ. ಬಿಜೆಪಿ 230ರ ಗಡಿ ದಾಟುವುದು ದುಸ್ತರ ಎಂದರು.

ಬಿಜೆಪಿಯನ್ನು ಚುನಾವಣೇಲಿ ಬಗ್ಗು ಬಡಿಬೇಕು:

ಪಂಜಾಬಿಗಳನ್ನು ಖಲೀಸ್ತಾನಿಗಳು, ಮುಸಲ್ಮಾನರನ್ನು ಉಗ್ರಗಾಮಿಗಳು ಆದಿವಾಸಿಗಳನ್ನು ನಕ್ಸಲರು ಎಂದು ಜರೆದು ದೇಶದ್ರೋಹಿಗಳ ಪಟ್ಟ ಕಟ್ಟುತ್ತಾರೆ. ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟುತ್ತಾರೆ‌. ರೈತರಿಗೆ ದ್ರೋಹ ಬಗೆದ ಇವರನ್ನು ಈ ಚುನಾವಣೆಯಲ್ಲಿ ಬಗ್ಗು ಬಡಿಯಬೇಕು ಎಂದರು.

ಕೃಷಿ ಕ್ಷೇತ್ರ ಉಳಿದರೆ ರೈತನ ಉಳಿವು: ಕೃಷಿ ಕ್ಷೇತ್ರ ಉಳಿದರೆ, ಕೃಷಿ ಮಾರುಕಟ್ಟೆ ಉಳಿದರೆ ರೈತನ ಉಳಿವು ಅದಕ್ಕಾಗಿ ಎನ್ ಡಿ ಎ ಸೋಲಿಸಲೇಬೇಕು ಎಂದು ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌ ಅಭಿಪ್ರಾಯ ಪಟ್ಟರು. ರೈತ ಸಂಘದಲ್ಲೂ ಮೋದಿ ಭಕ್ತರಿದ್ದಾರೆ. ಅವರಿಗೆ ಮೊದಲು ಕರಪತ್ರದ ಒಂದೊಂದು ಅಂಶವನ್ನು ಮನವರಿಕೆ ಮಾಡಬೇಕು. ಕೃಷಿ ಕಾಯ್ದೆಗಳನ್ನು ಹಿಂಬಾಗಿಲಿನಿಂದ ತರುವ ಪ್ರಯತ್ನ ನಡೆಯುತ್ತದೆ. ವಿದ್ಯುತ್ ಖಾಸಗೀಕರಣ ಮಾಡಲಾಗುತ್ತಿದೆ. ಕಾರ್ಪೊರೇಟ್ ಕಂಪನಿಗಳ 20ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ರೈತರ 5ಲಕ್ಷ ಕೋಟಿ ಮನ್ನಾ ಮಾಡಲಿಲ್ಲ.191ತಾಲೂಕು ಬರಪೀಡಿತವಾಗಿದ್ದರು. ಪರಿಹಾರ ಕೊಡಲಿಲ್ಲ. ನಿರ್ಮಲ ಸೀತಾರಾಮನ್ ಬರೀ ಸುಳ್ಳು ಹೇಳುತ್ತಾರೆ. ಅವರು ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. 3ಪ್ರಶ್ನೆ 3 ತೀರ್ಮಾನ: ಬಿಜೆಪಿಯವರು ಯಾರೇ ಓಟು ಕೇಳಲು ಬಂದರೆ ಅವರಿಗೆ 3 ಪ್ರಶ್ನೆ ಕೇಳಿ ಎಂದ ಜನಶಕ್ತಿ ಅಧ್ಯಕ್ಷ ನೂರ್ ಶ್ರೀಧರ್ ಹತ್ತು ವರ್ಷ ಅಧಿಕಾರದಲ್ಲಿದ್ದಾಗ ಯಾಕೆ ರೈತರ ಸಾಲ ಮನ್ನಾ ಮಾಡಲಿಲ್ಲ? ಎಂಎಸ್‌ಪಿ ಯಾಕೆ ಜಾರಿ ಮಾಡಲಿಲ್ಲ? ಬರಗಾಲ ಪರಿಹಾರ ಯಾಕೆ ಕೊಟ್ಟಿಲ್ಲ? ಹಾಗೆ ಮೂರು ತೀರ್ಮಾನ ತೆಗೆದುಕೊಳ್ಳಿ ರೈತ ವಿರೋಧಿ ಬಿಜೆಪಿ ಪಕ್ಷ ಶತಾಯ ಗತಾಯ ಸೋಲಿಸ್ತಿವಿ.ರೈತ ದ್ರೋಹಿ ಜೆಡಿಎಸ್ ಗೂ ತಕ್ಕ ಪಾಠ ಕಲಿಸ್ತಿವಿ. ಕಾಂಗ್ರೆಸ್ ಗೆ ರೈತ ನ್ಯಾಯದಲ್ಲಿ ಭರವಸೆ ಕೊಟ್ಟಂತೆ ರೈತರ ಸಾಲ ಮನ್ನಾ ಮಾಡಬೇಕು. ಎಂಎಸ್ಪಿ ಜಾರಿಮಾಡಬೇಕು. ಇಲ್ಲದಿದ್ದರೆ ನಿಮಗೂ ತಕ್ಕಪಾಠ ಕಲಿಸುತ್ತೇವೆ.ಬದಲಾವಣೆ ಶಕ್ತಿ ಇದೆ: ರೈತಸಂಘಕ್ಕೆ ಬದಲಾವಣೆಯ ಶಕ್ತಿ ಇದೆ. ಹಿಂದೆ ರೈತ ವಿರೋಧಿಯಾಗಿದ್ದ ಗುಂಡೂರಾವ್ ಸರ್ಕಾರವನ್ನು ಕಿತ್ತೋಗೆದದ್ದು ರೈತಸಂಘ ಎಂದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಇದು ಬಹುಮುಖ್ಯ ಚುನಾವಣೆ ರೈತರಿಗೆ ದ್ರೋಹ ಬಗೆದ ಮೋದಿ ಸರ್ಕಾರವನ್ನು ಕಿತ್ತೋಗೆಯಬೇಕು. ಪ್ರತಿ ಮನೆಗೆ ಕರಪತ್ರ ತಲುಪಿಸೋಣ. ಪ್ರತಿ ಮನೆ ತಲುಪುವುದು ಪಕ್ಷಗಳಿಂದಲೂ ಸಾಧ್ಯವಿಲ್ಲ ಲಕ್ಷಾಂತರ ಕರಪತ್ರ ಪ್ರಿಂಟ್ ಹಾಕಿಸಲಾಗಿದೆ.ಇದನ್ನು ಪ್ರತಿ ಮನೆಗೂ ತಲುಪಿಸುತ್ತೇವೆ ಎಂದರು. ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ ಉಪಾಧ್ಯಕ್ಷ ಮಹೇಶ್ ಪ್ರಭು ಮಾತನಾಡಿದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''