ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಆಗಬೇಕಿದ್ದ ರಸ್ತೆಗಳು ಗುಂಡಿಮಯವಾಗಿವೆ. ಪೊಲೀಸರು ಹಲ್ಲೆ ಮಾಡುವವರು, ಕಳ್ಳರನ್ನು ಬಿಟ್ಟು ವಾಹನ ಸವಾರನನ್ನು ಹಿಡಿದು ದಂಡ ಹಾಕುವುದರಲ್ಲಿ ನಿರತರಾಗಿದ್ದಾರೆ. ಸರ್ಕಾರಿ ಅಧಿಕಾರಿಗಳು ಜನರ ಸಮಸ್ಯೆ ಕೇಳದವರಂತಾಗಿದ್ದಾರೆ. ಜಿಲ್ಲೆಯ ಮಂತ್ರಿಗಳಿಗೂ ಈ ಜಿಲ್ಲೆಯ ಉಸ್ತುವಾರಿ ಬೇಡವಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಆರೋಪಿಸಿದರು.
ನಗರದಲ್ಲಿ 24 x 4 ನೀರು ಸರಬರಾಜು ಕೂಡ ಸರಿಯಾಗಿ ಆಗುತ್ತಿಲ್ಲ. ಯುಜಿಡಿ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ ಮೀತಿಮೀರಿದ್ದು, ಜಿಲ್ಲಾಡಳಿತ ಮತ್ತು ಪಾಲಿಕೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ನೀಡುವಲ್ಲಿ ಸಂಪೂರ್ಣವಿಫಲವಾಗಿದೆ. ಸೊರಬದಲ್ಲಿ ಜಿಲ್ಲಾ ಮಂತ್ರಿಗಳು 700 ಕೋಟಿ ರು.ಗಳ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಶಿವಮೊಗ್ಗ ನಗರದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದು, ನೂರಾರು ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಗಮನಹರಿಸುತ್ತಿಲ್ಲ ಎಂದು ಆಪಾದಿಸಿದರು.
ಡಿ.ಸಿ.ಕಚೇರಿ, ಎ.ಸಿ. ಕಚೇರಿ, ಪಾಲಿಕೆ ಅಧಿಕಾರಿ ಸಿಬ್ಬಂದಿ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮಾತ್ರ ಫೈಲುಗಳ ವಿಲೇವಾರಿ ಮಾಡುತ್ತಿದ್ದಾರೆ. ಅದಕ್ಕಾಗಿ ಹೆಚ್ಚಿನ ಸಮಯ ವಿನಿಯೋಗಿಸುತ್ತಿದ್ದು, ನಾಗರೀಕರ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ದೂರಿದರು.ಶ್ರೇಷ್ಠ ನಾಯಕ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಮಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರು ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ ಎಡಗಣ್ಣನ್ನು ಎತ್ತಿಕೂಡ ನೋಡುತ್ತಿಲ್ಲ. ಪ್ರಮುಖ ಬಡಾವಣೆಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳ ಸಮಸ್ಯೆ ಇದೆ. ಎಲ್ಲ ರಸ್ತೆಗಳು ನೀರಿಗಾಗಿ ಹಾಳಾಗಿದೆ. ಜನರ ಬಳಿ ಕಟ್ಟಿಸಿಕೊಂಡ ದುಡ್ಡಿನಲ್ಲೇ ಡಾಂಬರೀಕರಣ ಮಾಡಬಹುದಿತ್ತು. ಮೊದಲು ಸಚಿವರು ನಗರದ ಎಲ್ಲಾ ರಸ್ತೆಗಳಿಗೆ ಡಾಂಬರೀಕರಣ ಮಾಡಲಿ ಕಳೆದ ಎರಡೂವರೆ ವರ್ಷಗಳಿಂದ ಯಾವುದೇ ಕಾಮಗಾರಿ ಆಗಿಲ್ಲ ಎಂದರು.
ಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ದೀಪಕ್‌ಸಿಂಗ್, ಎಚ್.ಎಂ. ಸಂಗಯ್ಯ, ಶ್ಯಾಂ, ಗಂಧದಮನೆ ನರಸಿಂಹ, ಬೊಮ್ಮನಕಟ್ಟೆ ಮಂಜುನಾಥ್, ರಮೇಶ್‌ನಾಯಕ್, ವಿಜಯಕುಮಾರ್ ಮತ್ತಿತರರಿದ್ದರು.