ಹೊಸಕೋಟೆ: ಸರ್ಕಾರಿ ಶಾಲೆಗಳನ್ನು ಸಮಾಜದಲ್ಲಿನ ಸ್ಥಿತಿವಂತರು ದತ್ತು ಪಡೆಯುವುದರಿಂದ ಸರ್ವತೋಮುಖ ಅಭಿವೃದ್ದಿ ಸಾಧ್ಯ ಎಂದು ಬಿಎಂಆರ್‌ಡಿಎ ಸದಸ್ಯ ಡಾ.ಎಚ್.ಎಂ.ಸುಬ್ಬರಾಜ್ ತಿಳಿಸಿದರು.
ನಗರದ ಗೌತಮ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದ ಹಿನ್ನೆಲೆ ಶಾಸಕ ಶರತ್ ಬಚ್ಚೇಗೌಡ ಅವರಿಂದ ಅಭಿನಂದನೆ ಹಾಗೂ ಪ್ರಶಂಸನಾ ಪತ್ರವನ್ನು ಸ್ವೀಕರಿಸಿ ಮಾತನಾಡಿದರು.ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡುವ ಅನುದಾನಗಳು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಇದರಿಂದ ಶಿಕ್ಷಣದ ಬೋಧನಾ ಕ್ರಮ ಬದಲಾಗಬಹುದೆ ವಿನಃ ಅಲ್ಲಿನ ಮೂಲ ಸೌಕರ್ಯಗಳಿಗೆ ಸಾಕಾಗುವುದಿಲ್ಲ. ಇದರ ಪರಿಣಾಮ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಶಾಲೆಗಳು ಮುಚ್ಚುವ ಹಂತ ತಲುಪಿದ್ದರೆ, ಮತ್ತಷ್ಟು ಶಾಲೆಗಳಿಗೆ ಅಗತ್ಯ ಸೌಕರ್ಯಗಳಿಲ್ಲ. ಪ್ರಮುಖವಾಗಿ ಹಳೆಯ ಕಟ್ಟಡಗಳಲ್ಲೆ ಮಕ್ಕಳಿಗೆ ಪಾಠ ಪ್ರವಚನ ಮಾಡುವಂತಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ದಾನಿಗಳ ನೆರವಿನ ಜೊತೆಗೆ ಶಾಲೆಗಳನ್ನು ದತ್ತು ಪಡೆಯಬೇಕು ಎಂದರು.ಹೊಸಕೋಟೆಯ ಗೌತಮ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆಯುವ ಮೂಲಕ ನಾನು ಪ್ರತಿ ವರ್ಷ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳು, ಸಮವಸ್ತ್ರ, ತಟ್ಟೆಲೋಟ, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಸೇರಿದಂತೆ ಶಾಲೆಗೆ ಅಗತ್ಯ ಕೊಠಡಿಗಳನ್ನು ಸಹ ನಿರ್ಮಿಸಲು ಮುಂದಾಗಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಮಾತನಾಡಿ, ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು, ಸ್ವಯಂ ಸೇವಕ ಸಂಘಗಳಿಗೆ ಅವಕಾಶ ಇದ್ದು ತಮ್ಮ ತಮ್ಮ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿ ಪಡಿಸಲು ಮುಂದಾದರೆ ಸರ್ಕಾರಿ ಶಾಲೆಗಳ ಉಳಿವು ಸಾಧ್ಯ ಎಂದು ಹೇಳಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ನಗರೇನಹಳ್ಳಿ ಶ್ರೀನಿವಾಸಪ್ಪ ಸೇರಿದಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಫೋಟೋ: 14 ಹೆಚ್‌ಎಸ್‌ಕೆ 1ಹೊಸಕೋಟೆಯ ಗೌತಮ್ ಕಾಲೋನಿ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿಪಡಿಸುತ್ತಿರುವ ಬಿಎಂಆರ್‌ಡಿಎ ಸದಸ್ಯ ಡಾ.ಹೆಚ್.ಎಂ.ಸುಬ್ಬರಾಜ್ ಅವರನ್ನು ಶಾಸಕ ಶರತ್ ಬಚ್ಚೇಗೌಡ ಅಭಿನಂದಿಸಿ ಪ್ರಶಂಸನಾ ಪತ್ರ ವಿತರಿಸಿದರು.