ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಪುಣ್ಯದ ಕಾರ್ಯ: ಆಶಿಸ್ ಬಾಯಿ ವ್ಯಾಸ ಸ್ವಾಮೀಜಿ

KannadaprabhaNewsNetwork | Published : Jul 22, 2024 1:17 AM

ಸಾರಾಂಶ

ಇಂದಿನ ದಿನಮಾನಗಳಲ್ಲಿ ಆಧ್ಯಾತ್ಮ ನೇಪತ್ಯಕ್ಕೆ ಸರಿಯುವ ಕಾಲದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡುತ್ತಿರುವುದು ನಿಜಕ್ಕೂ ಪುಣ್ಯದ ಕಾರ್ಯವಾಗಿದೆ.

ಯಾತ್ರಾ ನಿವಾಸ ಉದ್ಘಾಟನಾ ಸಮಾರಂಭ

ಕನ್ನಡಪ್ರಭ ವಾರ್ತೆ ಕೊಪ್ಪಳ

ಇಂದಿನ ದಿನಮಾನಗಳಲ್ಲಿ ಆಧ್ಯಾತ್ಮ ನೇಪತ್ಯಕ್ಕೆ ಸರಿಯುವ ಕಾಲದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡುತ್ತಿರುವುದು ನಿಜಕ್ಕೂ ಪುಣ್ಯದ ಕಾರ್ಯವಾಗಿದೆ. ಪಾಟೀಲ್ ಕುಟುಂಬದ ಈ ಕಾರ್ಯ ಶ್ಲಾಘನೀಯ ಎಂದು ದೆಹಲಿಯ ಚಾರಿಟೇಬಲ್ ಟ್ರಸ್ಟ್‌ನ ಆಶಿಸ್ ಬಾಯಿ ವ್ಯಾಸ ಸ್ವಾಮೀಜಿ ಹೇಳಿದರು.

ತಾಲೂಕಿನ ತಿಮ್ಮನಮಟ್ಟಿ ವಿಜಯಾದ್ರಿ ಪರ್ವತದಲ್ಲಿ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿಯ ವತಿಯಿಂದ ₹25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಯಾತ್ರಾ ನಿವಾಸ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಗುರುಪೂರ್ಣಿಮೆಯಂದು ಮಹತ್ವದ ಕಾರ್ಯ ಮಾಡಲಾಗಿದೆ. ವಿಜಯಾದ್ರಿ ಪರ್ವತದ ಶ್ರೀ ವೀರಾಂಜನೇಯ ದೇವಸ್ಥಾನಕ್ಕೆ ಬರುವ ಭಕ್ತರು ತಂಗುವುದಕ್ಕೆ ಯಾತ್ರಾ ನಿವಾಸ ನಿರ್ಮಾಣ ಮಾಡಿ, ಲೋಕಾರ್ಪಣೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡುವುದು ನಿಜಕ್ಕೂ ಪುಣ್ಯದ ಕಾರ್ಯವಾಗಿದೆ. ಇದರಲ್ಲಿ ತೊಡಗಿಕೊಂಡವರಿಗೆ ಯಶಸ್ಸು ಖಂಡಿತ ಎಂದರು.

ದೆಹಲಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸುಭಾಸ್ ತ್ಯಾಗಿ ಮಾತನಾಡಿ, ವೀರನಗೌಡ ಪಾಟೀಲ್ ಮಾಡುತ್ತಿರುವ ಕಾರ್ಯಕ್ಕೆ ಕೈಜೋಡಿಸಿದ್ದೇನೆ. ಮುಂದಿನ ದಿನಗಳಲ್ಲಿಯೂ ಇಂಥ ಕಾರ್ಯಕ್ಕೆ ಸದಾ ಜೊತೆಯಲ್ಲಿ ಇರುತ್ತೇನೆ. ಸದಾ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು. ಯಾತ್ರಾ ನಿವಾಸದ ಅಗತ್ಯತೆಯನ್ನು ಪ್ರಸ್ತಾಪ ಮಾಡಿದಾಗ ಅದಕ್ಕೆ ಬೇಕಾಗಿರುವ ಸಹಕಾರ ನೀಡಲಾಗಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ವೀರಾಂಜನೇಯ ದೇವಸ್ಥಾನವನ್ನು ಸಾಕಷ್ಟು ಪ್ರಗತಿ ಮಾಡಲಾಗಿದೆ. ಇಲ್ಲಿಗೆ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಇದಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಒಂದು ಪ್ರದೇಶದ ಅಭಿವೃದ್ಧಿ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರಗತಿಯಿಂದಲೂ ಆಗುತ್ತದೆ. ಹೀಗಾಗಿ, ವೀರಾಂಜನೇಯ ದೇವಸ್ಥಾನ ಮುಂದಿನ ದಿನಗಳಲ್ಲಿ ದೊಡ್ಡ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ. ವೀರನಗೌಡ ಪಾಟೀಲ್ ಮಾಡುತ್ತಿರುವ ಈ ಮಹಾನ್ ಕಾರ್ಯಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.

ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿಯ ಅಧ್ಯಕ್ಷ ವಿ.ಆರ್. ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ, ಪ್ರಮುಖರಾದ ರಾಮದೇವಿ ತ್ಯಾಗಿ, ಎಸ್.ಆರ್. ಪಾಟೀಲ್, ಇಂಟರ್‌ನ್ಯಾಷನಲ್ ಹೋಟೆಲ್ ಮಾಲೀಕ ಶೇರಸಿಂಗ್, ಉದ್ಯಮಿ ಸಂತೋಷ ಉರುಳಿಕೊಪ್ಪ ಇದ್ದರು. ಹನುಮಂತಪ್ಪ ನಾಯಕ ಕಾರ್ಯಕ್ರಮ ನಿರೂಪಿಸಿದರು.

Share this article