ಸಮಾಜ ಮಂದಿರದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ

ಮೂಡುಬಿದಿರೆ: ಕೃಷಿಕರು ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಕೃಷಿಯನ್ನು ಲಾಭದಾಯಕ ಕಸುಬನ್ನಾಗಿಸಿ ಸಂತೃಪ್ತಿಯ ಜೀವನ ನಡೆಸಬಹುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಮೂಡುಬಿದಿರೆ, ಕೃಷಿ ಇಲಾಖೆ ದ.ಕ, ಕೃಷಿ ವಿಚಾರ ವಿನಿಮಯ ಕೇಂದ್ರ ಮತ್ತು ರೈತ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪೆನಿ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜನ್ಮದಿನಾಚರಣೆ ಪ್ರಯುಕ್ತ ಬುಧವಾರ ಸಮಾಜ ಮಂದಿರದಲ್ಲಿ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದೆ ನಾವು ತಿನ್ನುತ್ತಿದ್ದ ಆಹಾರದಲ್ಲೆ ಔಷಧೀಯ ಗುಣವಿತ್ತು. ಪರಿಶುದ್ಧ ಗಾಳಿ, ವಾತಾವರಣದಿಂದ ನಮ್ಮ ಹಿರಿಯರು ದೀರ್ಘಕಾಲ ಬದುಕುತ್ತಿದ್ದರು. ಆದರೆ ಇಂದು ನಾವು ತಿನ್ನುವ ಆಹಾರ ಕಾಯಿಲೆಗಳಿಗೆ ಮೂಲವಾಗುತ್ತಿದೆ ಎಂದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಕೃಷಿಯುತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಕೃಷಿಕ ಸಮಾಜದ ಸಂಪತ್ ಸಾಮ್ರಾಜ್ಯ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ರೈ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸಜನಾ, ಮಾತಾಜಿ ಬ್ರಹ್ಮಕುಮಾರಿ ದೀಪಾ ಈಶ್ವರಿ, ರೈತ್ಯ ಜನ್ಯ ಫಾರ್ಮರ್ ಪ್ರೊಡ್ಯೂಸರ್‍ನ ಅಧ್ಯಕ್ಷ ಲಿಯೋ ವಾಲ್ಟರ್ ನಝರತ್, ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಮುಖಂಡ ಶಾಂತಿಪ್ರಸಾದ್ ಹೆಗ್ಡೆ ಮತ್ತು ಕೆ.ವಿಕೆ ವಿಜ್ಞಾನಿ ಕೇದರನಾಥ್, ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಎಲ್ಲಣ್ಣ ಗೌಡ ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕರಾದ ಸುನಂದ ಶೆಟ್ಟಿ ಪಡುಮಾರ್ನಾಡು ಮತ್ತು ಶಿರ್ತಾಡಿಯ ಜೈಸನ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ರೈತರಿಗೆ ಸರಕಾರದ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು. ರೈತ ಜನ್ಯ ಕಂಪೆನಿಯ ಸಿಇಒ ಸಂದೀಪ್ ಸನ್ಮಾನಪತ್ರ ವಾಚಿಸಿದರು. ದೀಪಕ್ ಸ್ವಾಗತಿಸಿದರು. ಸದಾನಂದ ನಾರಾವಿ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಕೃಷಿ ವಿಜ್ಞಾನಿಗಳು ಮತ್ತು ರೈತರ ಮಧ್ಯೆ ಕೃಷಿ ವಿಚಾರಗೋಷ್ಠಿ ನಡೆಯಿತು.