ನಿಟ್ಟೆ ವಿನಯ್ ಹೆಗ್ಡೆ ಅಂತ್ಯಸಂಸ್ಕಾರವನ್ನು ನಿಟ್ಟೆ ಕಾಲೇಜಿನ ಸಮೀಪದ ಸನ್ಮತಿ ಗಾರ್ಡನ್‌ನಲ್ಲಿ ನೆರವೇರಿಸಲಾಯಿತು. ಪುತ್ರ ವಿಶಾಲ್ ಹೆಗ್ಡೆ ಅವರು ತಂದೆಯ ಪಾರ್ಥಿವ ಶರೀರದ ಅಂತಿಮ ಕ್ರಿಯಾವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಕಳ: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಎನ್. ವಿನಯ್ ಹೆಗ್ಡೆ ಅವರ ಪಾರ್ಥಿವ ಶರೀರವನ್ನು ಮಂಗಳೂರಿನಿಂದ ನಿಟ್ಟೆಗೆ ಸಂಜೆ ನಾಲ್ಕು ಗಂಟೆಗೆ ತರಲಾಯಿತು. ನಂತರ ನಿಟ್ಟೆ ಕಾಲೇಜು ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಎನ್. ವಿನಯ್ ಹೆಗ್ಡೆ ಅವರ ಸಹೋದರ, ವಾಯುಸೇನೆಯ ಹಿರಿಯ ಮಾಜಿ ಅಧಿಕಾರಿ ಪ್ರಸನ್ನ ಹೆಗ್ಡೆ, ಕಿರಿಯ ಸಹೋದರ, ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಸೇರಿದಂತೆ ಕುಟುಂಬಿಕರು ಉಪಸ್ಥಿತರಿದ್ದರು.
ನಿಟ್ಟೆಗೆ ಆಗಮಿಸಿದ ಬಳಿಕ ಅವರ ಮೃತದೇಹಕ್ಕೆ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬ್ರಿಜೇಶ್ ಚೌಟ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಗಣೇಶ್ ಕಾರ್ಣಿಕ್ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಶಾಸಕರು, ಅಳ್ವಾಸ್ ಶಿಕ್ಷಣ ಸಂಸ್ಥೆಗಳ ವಿವೇಕ್ ಆಳ್ವ ಅಂತಿಮ ನಮನ ಸಲ್ಲಿಸಿದರು.ಅಂತ್ಯ ಸಂಸ್ಕಾರವನ್ನು ಸಂಜೆ ವೇಳೆಗೆ ಕಾರ್ಕಳದ ನಿಟ್ಟೆ ಕಾಲೇಜಿನ ಸಮೀಪದ ಸನ್ಮತಿ ಗಾರ್ಡನ್‌ನಲ್ಲಿ ನೆರವೇರಿಸಲಾಯಿತು. ಪುತ್ರ ವಿಶಾಲ್ ಹೆಗ್ಡೆ ಅವರು ತಂದೆಯ ಪಾರ್ಥಿವ ಶರೀರದ ಅಂತಿಮ ಕ್ರಿಯಾವಿಧಿ ವಿಧಾನಗಳನ್ನು ನೆರವೇರಿಸಿದರು.ವಿನಯ್ ಹೆಗ್ಡೆ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು, ಅಂತರರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್, ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ್ ಶೆಟ್ಟಿ, ಕ್ರಿಯೇಟಿವ್ ಕಾಲೇಜು ಸಂಸ್ಥಾಪಕ ಗಣನಾಥ ಶೆಟ್ಟಿ, ಅಶ್ವಥ್ ಎಸ್.ಎಲ್. ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.