ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಗಣದಲ್ಲಿ ಗುರುವಾರ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಕ್ಷೇತ್ರ ಬೆಳವಣಿಗೆಗೆ ಕೃಷಿ, ರೇಷ್ಮೆ, ಪಶುಸಂಗೋಪನೆ ಕ್ಷೇತ್ರಗಳು ವಿಶೇಷವಾಗಿ ಪ್ರಗತಿ ಸಾಧಿಸಿದರೆ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸದೃಢರಾಗಲಿದ್ದಾರೆ. ಹೈನುಗಾರಿಕೆ ಗ್ರಾಮೀಣ ಜನರ ಉಪ ಕಸುಬಾಗಿದೆ. ಪ್ರಸ್ತುತ ರಾಜ್ಯದಲ್ಲಿ ೧೬ ಹಾಲು ಒಕ್ಕೂಟಗಳಿದ್ದು, ಪ್ರತಿದಿನ ೧ ಕೋಟಿ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಗುಜರಾತ್ ರಾಜ್ಯ ಹೊರತುಪಡಿಸಿ ಇಡೀ ದೇಶದಲ್ಲಿಯೇ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ೨ನೇ ಸ್ಥಾನ ಪಡೆದಿದೆ. ಇದಕ್ಕೆ ರಾಜ್ಯದ ಎಲ್ಲಾ ಸಹಕಾರಿಗಳೇ ಕಾರಣರಾಗಿದ್ದಾರೆ ಎಂದರು.ರೈತರ ಅನುಕೂಲಕ್ಕಾಗಿ ೨ ಬಾರಿ ಹಾಲಿನ ಪ್ರೋತ್ಸಾಹಧನ ಹೆಚ್ಚಿಸಿದೆ. ಕ್ಷೀರಧಾರೆ ಯೋಜನೆಯಡಿ ಒಂದು ಲೀ. ಹಾಲಿಗೆ ೫ ರು. ಪ್ರೋತ್ಸಾಹಧನವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಹಾಲು ಒಕ್ಕೂಟಗಳಿಲ್ಲದ ಜಿಲ್ಲೆಗಳಲ್ಲಿ ಒಕ್ಕೂಟ ತೆರೆಯುವಂತೆ ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಹಾಲು ಒಕ್ಕೂಟ ತೆರೆಯಲಾಗುವುದು ಎಂದು ತಿಳಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡೂವರೆ ವರ್ಷಗಳನ್ನು ಪೂರೈಸಿದೆ. ಯಾವುದೇ ತಾರತಮ್ಯವಿಲ್ಲದೇ ಸಮಾಜದ ಎಲ್ಲಾ ಬಡವರ ಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ. ಈ ಹಿಂದೆ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬಂದಾಗ ಕ್ಷೀರಭಾಗ್ಯ ಯೋಜನೆ ಜಾರಿಗೊಳಿಸಿದ್ದೆ. ನನ್ನದೇ ನಾಯಕತ್ವದಲ್ಲಿ ಸರ್ಕಾರ ೨ನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಸಾಮಾಜಿಕ ಅಸಮತೋಲನ ನಿವಾರಣೆಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ಸಮಾಜದ ಎಲ್ಲರಿಗೂ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ರಾಜಕೀಯ ಶಕ್ತಿ ದೊರೆಯುವಂತಾಗಲು ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಸಹಕಾರ ಚಳವಳಿ ಕ್ರಿ.ಶ. ೫-೬ನೇ ಶತಮಾನದಲ್ಲಿ ಬೌದ್ದ ಬಿಕ್ಕುಗಳಿಂದ ಆರಂಭವಾಗಿ ಬಳಿಕ ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವಮಂಟಪದಲ್ಲಿ ಶಿವಶರಣದ ಧಾರ್ಮಿಕ ಚಳವಳಿ ರು.ಪ ಪಡೆಯಿತು. ನಂತರ ಗಾಂಧಿಜೀಯವರ ಸ್ವದೇಶಿ, ಅಸಹಕಾರ ಚಳವಳಿ ಅತ್ಯಂತ ಮಹತ್ವವಾದವು. ೧೯೦೪ರಲ್ಲಿ ಸಿದ್ದನಗೌಡದ ಸಹಕಾರ ಚಳವಳಿ ಸಹಕಾರ ಕ್ಷೇತ್ರ ಬೆಳವಣಿಗೆಗೆ ನಾಂದಿಯಾಯಿತು. ಕರ್ನಾಟಕದಲ್ಲಿ ೪೭ ಸಾವಿರ ಸಹಕಾರ ಸಂಘಗಳಿವೆ. ಇವೆಲ್ಲವೂ ಜನರ ಸ್ವಾವಲಂಬಿ ಪರಿಕಲ್ಪನೆ ಹೊಂದಿವೆ ಎಂದು ಹೇಳಿದರು.
ಸಂಸದ ಸುನೀಲ್ ಬೋಸ್ ಮಾತನಾಡಿ, ಸಹಕಾರ ಕ್ಷೇತ್ರವು ೭೨ ವರ್ಷಗಳನ್ನು ಪೂರೈಸಿದೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ಸಹಕಾರ ಕ್ಷೇತ್ರದ ಬೆಳವಣಿಗೆ ಸಾಕಷ್ಟು ಹಿರಿಯ ಸಹಕಾರಿಗಳು ದುಡಿದಿದ್ದಾರೆ. ಸಾಮಾಜಿಕ, ಅರ್ಥಿಕ ಸದೃಢತೆ ಸಾಧಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಸಹಕಾರ ಸಂಘದ ಸದಸ್ಯರು ಬ್ಯಾಂಕ್ ಸಾಲ ಪಡೆದು ಕೃಷಿ ಚಟುವಟಿಕೆಗಳಲ್ಲಿ ಹಾಗೂ ಮಹಿಳೆಯರು ಹೈನುಗಾರಿಕೆ ನಡೆಸಿ ಸ್ವಾವಲಂಬನೆ ಸಾಧಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು. ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್ ಪ್ರಸಾದ್, ಎಂ.ಆರ್. ಮಂಜುನಾಥ್, ದರ್ಶನ್ ಧುವ ನಾರಾಯಣ್, ವಿಧಾನ ಪರಿಷತ್ ಶಾಸಕ ಡಾ. ಡಿ. ತಿಮ್ಮಯ್ಯ, ಕೆ. ಶಿವಕುಮಾರ್, ಕಾಡಾ ಅಧ್ಯಕ್ಷರಾದ ಪಿ. ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಎಚ್.ವಿ. ಚಂದ್ರು, ಮಾಜಿ ಶಾಸಕ ಆರ್. ನರೇಂದ್ರ, ಕಳಲೆ ಕೇಶವಮೂರ್ತಿ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಎಚ್.ಎಸ್. ನಂಜುಂಡಪ್ರಸಾದ್, ಮುಖಂಡರಾದ ರಾಮಪ್ಪ, ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್, ಸಹಕಾರ ಇಲಾಖೆ ಕಾರ್ಯದರ್ಶಿ ಎಸ್.ಬಿ. ಶೆಟ್ಟಣ್ಣನವರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.