ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ: ಗಣೇಶ್‌

KannadaprabhaNewsNetwork | Published : May 13, 2024 12:06 AM

ಸಾರಾಂಶ

ಮೇ 13 ಮರೆಯದ ದಿನ, ನಿರೀಕ್ಷೆಗೂ ಮೀರಿದ ಗೆಲುವನ್ನು ಕ್ಷೇತ್ರದ ಜನತೆ ಕೊಟ್ಟಿದ್ದಾರೆ. ಈ ಗೆಲುವನ್ನು ಮರೆಯಲು ಸಾಧ್ಯವೇ ಇಲ್ಲ. ದೊಡ್ಡ ಅಂತರದ ಗೆಲುವು ಖುಷಿಯಾಯ್ತು. ಕಾಂಗ್ರೆಸ್‌ ಶಾಸಕರಾಗಿ ಎಚ್.ಎಂ.ಗಣೇಶ್‌ ಪ್ರಸಾದ್‌ (೨೦೨೩ ರ ಮೇ ೧೩) ಇಂದಿಗೆ ಆಯ್ಕೆಯಾಗಿ ಒಂದು ವರ್ಷ ತುಂಬಿದ ಸಮಯದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೇ 13 ಮರೆಯದ ದಿನ, ನಿರೀಕ್ಷೆಗೂ ಮೀರಿದ ಗೆಲುವನ್ನು ಕ್ಷೇತ್ರದ ಜನತೆ ಕೊಟ್ಟಿದ್ದಾರೆ. ಈ ಗೆಲುವನ್ನು ಮರೆಯಲು ಸಾಧ್ಯವೇ ಇಲ್ಲ. ದೊಡ್ಡ ಅಂತರದ ಗೆಲುವು ಖುಷಿಯಾಯ್ತು. ಕಾಂಗ್ರೆಸ್‌ ಶಾಸಕರಾಗಿ ಎಚ್.ಎಂ.ಗಣೇಶ್‌ ಪ್ರಸಾದ್‌ (೨೦೨೩ ರ ಮೇ ೧೩) ಇಂದಿಗೆ ಆಯ್ಕೆಯಾಗಿ ಒಂದು ವರ್ಷ ತುಂಬಿದ ಸಮಯದಲ್ಲಿ ಕನ್ನಡಪ್ರಭದೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.

ಗಣೇಶ್‌ ಹೇಳಿದಿಷ್ಟು:

ಇಂದಿಗೆ (ಮೇ ೧೩) ಶಾಸಕನಾಗಿ ಆಯ್ಕೆಯಾದಾಗ ತುಂಬ ಖುಷಿಯಾಯ್ತು. ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದಾರೆ. ನಿರೀಕ್ಷೆಗೂ ಮೀರಿ ಬಹುಮತ ನೀಡಿದ್ದು, ಎಂದಿಗೂ ಮರೆಯಲು ಸಾಧ್ಯವಿಲ್ಲ ಎನಿಸುತ್ತಿದೆ. ಜನರ ನಿರೀಕ್ಷೆ ಜಾಸ್ತಿಯಿದೆ, ಜನರ ಎಲ್ಲಾ ನಿರೀಕ್ಷೆ ಮುಟ್ಟಲು ಸಾಧ್ಯವಿಲ್ಲ, ನನ್ನ ಇತಿ ಮಿತಿಯೊಳಗೆ ಕ್ಷೇತ್ರದ ಅಭಿವೃದ್ಧಿ ಹಾಗೂ ಜನತೆ ಕೆಲಸ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ.ಕಳೆದೊಂದು ವರ್ಷದಲ್ಲಿ ನೂರು ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ಸಿಎಂ ವಿಶೇಷ ಅನುದಾನ ೨೫ ಕೋಟಿ ಬಂದಿದೆ. ಕೆಲವು ಕಡೆ ಕೆಲಸ ಶುರುವಾಗಿವೆ. ಕಾಮಗಾರಿಗೆ ಅಪ್ರೂವಲ್‌ ಆಗಿದೆ. ಲೋಕಸಭೆ ಚುನಾವಣೆ ಎದುರಾದ ಹಿನ್ನೆಲೆ ಚುನಾವಣೆ ಬಳಿಕ ಚಾಲನೆ ಕಾಮಗಾರಿಗೆ ಸಿಗಲಿದೆ. ತಾಲೂಕಿನ ಬೊಮ್ಮನಹಳ್ಳಿ ಅಂಬೇಡ್ಕರ್‌ ವಸತಿ ಶಾಲೆಯ ೧೨ ಕೋಟಿ ವೆಚ್ಚದಲ್ಲಿ ಶುರುವಾಗಿದೆ. ಬೇಗೂರು ಬಳಿಯ ಗರಗನಹಳ್ಳಿ ಮೊರಾರ್ಜಿ ವಸತಿ ಶಾಲೆಗೆ ಟೆಂಡರ್‌ ಕೂಡ ಆಗಿದ್ದು ೧೨ ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಾಮಗಾರಿ ಆರಂಭವಾಗಬೇಕಿದೆ.

ಬೇಗೂರು ಬಳಿ ೬.೫ ಕೋಟಿ ವೆಚ್ಚದಲ್ಲಿ ಹತ್ತಿ ಮಾರುಕಟ್ಟೆಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಕೂಡ ಪ್ರಗತಿಯಲ್ಲಿದೆ. ರಸ್ತೆಗಳ ಅಭಿವೃದ್ಧಿಗೆ ಎಸ್‌ಎಚ್‌ಡಿಪಿಯಲ್ಲಿ ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಗುಂಡ್ಲುಪೇಟೆಗೆ ಸಚಿವರನ್ನು ಆಹ್ಚಾನಿಸಿದ್ದೇನೆ.

ಪ್ರಸ್ತಾವನೆ: ಗುಂಡ್ಲುಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಬೇಗೂರು ಸಮುದಾಯ ಕೇಂದ್ರ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೂ ಗ್ರಾಮೀಣ ಪ್ರದೇಶದ ಶಾಲಾ ಕಟ್ಟಡಗಳಿಗೆ ಅನುದಾನ ಬಂದಿದೆ. ಟೆಂಡರ್‌ ಆದ ಬಳಿಕ ಕಾಮಗಾರಿಗೆ ಆರಂಭವಾಗಲಿದೆ.

ಪಶು ಆಸ್ಪತ್ರೆ ಬಂತು: ತಾಲೂಕಿನ ಬೇಗೂರು ಬಳಿಯ ಸೋಮಹಳ್ಳಿ ಗ್ರಾಮದಲ್ಲಿ ಪಶು ಆಸ್ಪತ್ರೆ ಬೇಕು ಎಂಬ ಗ್ರಾಮಸ್ಥರ ಬಹುದಿನದ ಬೇಡಿಕೆಯಂತೆ ಸೋಮಹಳ್ಳಿಗೆ ಪಶು ಆಸ್ಪತ್ರೆ ಪ್ರಾರಂಭಿಸಲಾಗಿದೆ.

ವೇಗ ಕೊಟ್ಟಿದ್ದೇನೆ: ಗುಂಡ್ಲುಪೇಟೆ ಪಟ್ಟಣಕ್ಕೆ ಎಕ್ಸ್‌ಪ್ರೆಸ್‌ ಲೈನ್‌ ಮೂಲಕ ಕುಡಿವ ನೀರಿನ ಕಾಮಗಾರಿಗೆ ನಾನು ಶಾಸಕನಾದ ಬಳಿಕ ಕಾಮಗಾರಿಗೆ ವೇಗ ಕೊಟ್ಟಿದ್ದೇನೆ. ಕಾಮಗಾರಿ ಕೂಡ ಭರದಿಂದ ನಡೆಯುತ್ತಿದೆ.ಹರವೆ ಲೀಡ್‌ ಕೇಳಿ ಶಾಕ್‌ ಆಯ್ತು:

ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ೨೦೨೩ ರ ಮೇ ೧೩ ರಂದು ಮತ ಏಣಿಕೆಯ ಸಮಯದಲ್ಲಿ ಹರವೆ ಜಿಪಂ ಕ್ಷೇತ್ರದ ಲೀಡ್‌ ಕೇಳಿ ನನಗೆ ಕೆಲ ಕಾಲ ಶಾಕ್‌ ಆಗಿತ್ತು ಎಂದು ಕಾಂಗ್ರೆಸ್‌ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಬೇಗೂರು ಭಾಗದಲ್ಲಿ ನನಗೆ ಲೀಡ್‌ ಬರುತ್ತದೆ ಎಂಬ ವಿಶ್ವಾಸ ಹಾಗೂ ನಂಬಿಕೆ ಇತ್ತು. ಬಳಿಕ ಹರವೆ ಭಾಗದಲ್ಲಿ ಕಾಂಗ್ರೆಸ್‌ ಲೀಡ್‌ ಬಂತು ಎಂದು ಮತ ಏಣಿಕೆ ಕೇಂದ್ರದಲ್ಲಿದ್ದ ಮುಖಂಡರೊಬ್ಬರು ನನಗೆ ತಿಳಿಸಿದಾಗ ಶಾಕ್‌ ಆಯ್ತು ಎಂದು ಹೇಳಿಕೊಂಡರು.

ವರ್ಷದಲ್ಲಿ ನೂರು ಕೋಟಿ:

ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರಕ್ಕೆ ನೂರು ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ.ಲೋಕಸಭೆ ಚುನಾವಣೆ ಬಳಿಕ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುವುದಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಸರ್ಕಾರದ ಅಸ್ಥಿತ್ವಕ್ಕೆ ಬಂದ ಬಳಿಕ ಚುನಾವಣೆಗೂ ನೀಡಿದ್ದ 5 ಗ್ಯಾರಂಟಿ ಅನುಷ್ಠಾನಕ್ಕೆ ತರಲು ಐದಾರು ತಿಂಗಳು ಕಾಲ ಹಿಡಿಯಿತು. ಈಗ ಅಭಿವೃದ್ಧಿ ಕೆಲಸಕ್ಕೆ ಅನುದಾನ ಬಿಡುಗಡೆ ಸರ್ಕಾರ ಮಾಡುತ್ತಿದೆ ಎಂದರು.

ಕೋಟ್‌....

ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಲ್ಲ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ. ಮಹದೇವಪ್ರಸಾದ್‌ ಹಾಕಿಕೊಟ್ಟ ಹಾದಿಯೇ ನನಗೆ ಮಾರ್ಗ. ವಿಪಕ್ಷಗಳ ಟೀಕೆ ರಚನಾತ್ಮಕವಾಗಿ ಇದ್ದರೆ ಸ್ವಾಗತಿಸೋಣ, ವಿನಾಕಾರಣ ಟೀಕೆಗೆ ಜನರೇ ಕಳೆದ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ.

- ಗಣೇಶ್‌ ಪ್ರಸಾದ್‌, ಶಾಸಕ, ಗುಂಡುಪೇಟೆ ಕ್ಷೇತ್ರ

Share this article