ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ನದಿಗೆ ಅಸ್ಥಿ ಬಿಡುವವರಿಂದ ಪ್ರತಿ ಪೂಜೆಗೆ ೧೦೦ ರು. ಹಾಗೂ ಕಾವೇರಿ ನದಿ ದಂಡೆಯಲ್ಲಿ ಇತರೆ ಪೂಜಾ ಕೈಂಕರ್ಯ ಕೈಗೊಳ್ಳುವವರಿಂದ ೧೦೦ ರು. ಶುಲ್ಕ ಪಡೆಯುವಂತೆ ಪುರಸಭೆ ದರ ನಿಗದಿಪಡಿಸಿದೆ. ಎನ್.ರವಿಕುಮಾರ್ ಎಂಬುವವರು ೨ ಲಕ್ಷ ರು. ಭದ್ರತಾ ಠೇವಣಿ ಇಟ್ಟು ಟೆಂಡರ್ ಪಡೆದುಕೊಂಡಿದ್ದಾರೆ.
೨೦೨೫ರ ಜೂನ್ ತಿಂಗಳಲ್ಲಿ ಟೆಂಡರ್ ಪಡೆದಿರುವ ಗುತ್ತಿಗೆದಾರ ಎನ್.ರವಿಕುಮಾರ್ ಸ್ವಚ್ಛತಾ ಕಾರ್ಯಕ್ಕೆ ಯಾತ್ರಾರ್ಥಿಗಳಿಂದ ೧೦೦ ರು. ಬದಲಿಗೆ ೨೦೦, ೩೦೦, ೫೦೦ ರು.ಗಳನ್ನು ದಬ್ಬಾಳಿಕೆಯಿಂದ ಗಲಾಟೆ ಮಾಡಿ ವಸೂಲಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಕುಟುಂಬದವರ ಸಾವಿನ ನೋವಿನಲ್ಲಿರುವ ಭಕ್ತರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರೂ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಜಾಣಮೌನ ವಹಿಸಿದ್ದಾರೆ ಎಂದು ಚಲುವರಾಜು ಎಂಬುವರು ಲೋಕಾಯುಕ್ತರು ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದ್ದಾರೆ.ಒಂದು ಪೂಜೆಗೆ ೧೦೦ ರು.ನ ಎರಡರಿಂದ ಐದು ಟಿಕೆಟ್:
ಸ್ವಚ್ಛತಾ ಕಾರ್ಯಕ್ಕೆ ಮನಸೋಇಚ್ಛೆ ಟಿಕೆಟ್ ಹರಿಯುತ್ತಾ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಮಾಡಿದ ಜನರೊಂದಿಗೆ ಜಗಳಕ್ಕಿಳಿಯುವುದು, ತನ್ನ ಕಡೆಯ ಹುಡುಗರಿಂದ ಬೆದರಿಕೆ ಹಾಕುತ್ತಿರುವ ಬಗ್ಗೆಯೂ ಸಾಕಷ್ಟು ದೂರುಗಳು ಕೇಳಿಬಂದಿವೆ. ದೂರದ ಊರುಗಳಿಂದ ಶ್ರೀರಂಗಪಟ್ಟಣಕ್ಕೆ ಬರುವ ಯಾತ್ರಾರ್ಥಿಗಳು ಟೆಂಡರ್‌ದಾರನ ಧನದಾಹದಿಂದ ರೋಸಿಹೋಗಿದ್ದಾರೆ.
ಕಾವೇರಿ ನದಿ ದಂಡೆಗಳಲ್ಲಿ ಅಸ್ಥಿ ವಿಸರ್ಜನೆ ಮತ್ತು ಇತರೆ ಪೂಜಾ ಕಾರ್ಯಗಳನ್ನು ಮಾಡುತ್ತಿದ್ದು, ಅಸ್ಥಿ ವಿಸರ್ಜನೆ ಸಮಯದಲ್ಲಿ ಬರುವ ಯಾತ್ರಾರ್ಥಿಗಳು ಕಾವೇರಿ ನದಿಗೆ ಅಸ್ಥಿ ವಿಸರ್ಜನೆ, ಪ್ಲಾಸ್ಟಿಕ್, ಬಟ್ಟೆ ಹಾಗೂ ಇತರೆ ತ್ಯಾಜ್ಯಗಳನ್ನು ಬಿಡುತ್ತಿರುವುದರಿಂದ ನದಿ ನೀರು ಮಲಿನವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕುಶಾಲ್‌ಕುಮಾರ್ ಕೌಶಿಕ್ ಎಂಬುವರು ಹೈಕೋರ್ಟ್‌ನಲ್ಲಿ ರಿಟ್‌ಪಿಟಿಷನ್ ದಾಖಲಿಸಿದ್ದರು. ಇದರನ್ವಯ ಹೈಕೋರ್ಟ್ ನೀಡಿರುವ ಆದೇಶದಲ್ಲಿ ನದಿ ನೀರು ಮಲಿನವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿರುವ ಕಾವೇರಿ ನದಿ ದಂಡೆಯಲ್ಲಿರುವ ಸ್ನಾನಘಟ್ಟ, ಪಶ್ಚಿಮವಾಹಿನಿ, ಸಂಗಮ, ಗೋಸಾಯಿಘಾಟ್ ಪ್ರದೇಶದಲ್ಲಿ ಅಸ್ಥಿ ಬಿಡುವ ಮತ್ತು ಇತರೆ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವವರಿಂದ ೧೦೦ ರು. ಶುಲ್ಕ ನಿಗದಿಪಡಿಸಲಾಗಿದೆ.
ನದಿ ನೀರಿನ ಸ್ವಚ್ಛತೆಯ ಗುತ್ತಿಗೆ ಪಡೆದಿರುವ ಟೆಂಡರ್‌ದಾರರು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವುದರಿಂದ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಟೆಂಡರ್‌ದಾರನ ದಬ್ಬಾಳಿಕೆ ವಿರುದ್ಧ ಚಲುವರಾಜು ಎಂಬುವರು ಪುರಸಭೆ ಮುಖ್ಯಾಧಿಕಾರಿ, ಲೋಕಾಯುಕ್ತರಿಗೆ ದೂರು ನೀಡಿದ್ದರೂ ಇದುವರೆಗೂ ಯಾರೊಬ್ಬರೂ ಟೆಂಡರ್‌ದಾರನ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಧಿಕಾರಿಗಳು, ಪೊಲೀಸರೂ ಟೆಂಡರ್‌ದಾರನ ಬೆಂಬಲಕ್ಕೆ ನಿಂತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಪುರೋಹಿತರಿಂದಲೂ ಹಣ ವಸೂಲಿ
- ಚಲುವರಾಜು, ದೂರುದಾರ