ಬಿಜೆಪಿಯಲ್ಲಿ ಶಿಸ್ತು ಮಾಯ: ಹೆಬ್ಬಾರ

KannadaprabhaNewsNetwork |  
Published : Sep 03, 2024, 01:40 AM IST
ಸುದ್ದಿಗಾರರ ಜತೆ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು. | Kannada Prabha

ಸಾರಾಂಶ

ಉತ್ತರಕನ್ನಡ ಜಿಲ್ಲೆಯಲ್ಲಿ ರಾಮಕೃಷ್ಣ ಹೆಗಡೆ ನಂತರ ಮತ್ತೆ ಮುಖ್ಯಮಂತ್ರಿ ಸ್ಥಾನ ಬರುತ್ತದೆ ಎಂದರೆ ಸಂತೋಷ ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಶಿರಸಿ: ಬಿಜೆಪಿ ಶಿಸ್ತಿನ ಪಕ್ಷ ಎಂಬುದು ಕಳೆದುಹೋಗಿದ್ದು, ಶಿಸ್ತು ಶಬ್ದದ ಹಿಂದೆ "ಅ " ಹಾಕಿಕೊಳ್ಳುವ ಕಾಲ ಬಂದಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ತಿರುಗೇಟು ನೀಡಿದರು.

ಸೋಮವಾರ ಗುಡ್ನಾಪುರದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷ ಎಂಬುದು ಕಳೆದುಹೋಗಿದ್ದು, ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಿದೆ. ಬಿಜೆಪಿಯ ಹಿರಿಯ ನಾಯಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಯಡಿಯೂರಪ್ಪ ಮತ್ತು ಅವರ ಮಕ್ಕಳ ಬಗ್ಗೆ ವಿಧಾನಸೌಧದ ಒಳಗಡೆ ಮತ್ತು ಹೊರಗಡೆ ಏನೆಲ್ಲ ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಸಾವಿರಾರು ಕೋಟಿ ರು. ಪಡೆದಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ. ಅವರನ್ನು ಏನು ಮಾಡಿದ್ದಾರೆ ಎಂದು ಬಿಜೆಪಿಗರಿಗೆ ಪ್ರಶ್ನಿಸಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ರಾಮಕೃಷ್ಣ ಹೆಗಡೆ ನಂತರ ಮತ್ತೆ ಮುಖ್ಯಮಂತ್ರಿ ಸ್ಥಾನ ಬರುತ್ತದೆ ಎಂದರೆ ಸಂತೋಷ. ರಾಜಕೀಯದ ದೃಷ್ಟಿಕೋನದಲ್ಲಿ ಚರ್ಚೆ ಮಾಡುವುದಿಲ್ಲ. ಜಿಲ್ಲೆಯ ಸರ್ವಾಂಗೀಣ ಪ್ರಗತಿ ಮತ್ತು ಅಭಿವೃದ್ಧಿಯಾಗಬೇಕು. ಜಿಲ್ಲೆಗೆ ಮುಖ್ಯಮಂತ್ರಿ ಸ್ಥಾನ ಬಂದರೆ ಸ್ವಾಗತಿಸುತ್ತೇನೆ ಎಂದರು.

ಬನವಾಸಿ ಭಾಗದಲ್ಲಿ ಕೆರೆ ತುಂಬಿಸುವ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ೧೧೦ ಕೆವಿ ವಿದ್ಯುತ್ ಗ್ರಿಡ್ ನಿರ್ಮಾಣ ಮಾಡಲಾಗಿದ್ದು, ಜಡೆ ಭಾಗದಿಂದ ವಿದ್ಯುತ್ ಮಾರ್ಗ ಬರಬೇಕಾಗಿರುವುದರಿಂದ ಐದಾರು ಕಂಬ ಅಳವಡಿಸಲು ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾರಣದಿಂದ ವಿಳಂಬವಾಗಿದ್ದು, ಅವರನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನ ಸಾಗಿದೆ ಎಂದರು.

ಕೆರೆ ತುಂಬಿಸುವ ೨ನೇ ಹಂತದ ಯೋಜನೆಗೆ ಸರ್ಕಾರದ ಬಳಿ ಪ್ರಸ್ತಾಪ ಸಲ್ಲಿಸುತ್ತೇನೆ. ಕೆರೆ ತುಂಬಿಸುವ ಯೋಜನೆಯಿಂದ ತಾಲೂಕಿನ ಪೂರ್ವ ಭಾಗದ ೧೦ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಬದುಕಿಗೆ ಶಾಶ್ವತ ನೆಲೆ ಕಲ್ಪಿಸಿದಂತಾಗುತ್ತದೆ ಎಂದರು.ಗುಡ್ನಾಪುರ ಕೆರೆಗೆ ಶಾಸಕ ಹೆಬ್ಬಾರ ಬಾಗಿನ

ಶಿರಸಿ: ತಾಲೂಕಿನ ಗುಡ್ನಾಪುರ ಕೆರೆ ತುಂಬಿದ ಹಿನ್ನೆಲೆ ಶಾಸಕ ಶಿವರಾಮ ಹೆಬ್ಬಾರ ಅವರು ಸೋಮವಾರ ಬಾಗಿನ ಸಮರ್ಪಿಸಿದರು.ನಂತರ ಮಾತನಾಡಿದ ಅವರು, ಗುಡ್ನಾಪುರ ಕೆರೆ ತುಂಬಿದರೆ ಮೇಲೆ ಮತ್ತು ಕೆಳ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ.ರೈತರ ಜೀವನಾಡಿಯಾಗಿರುವ ಕೆರೆ ತುಂಬಿ ದೇಶಕ್ಕೆ ಅನ್ನ ನೀಡುವ ಅನ್ನದಾತ ಸುಭಿಕ್ಷವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದ್ದು, ಕೆರೆ ತುಂಬಿದಾಗ ಪ್ರತಿವರ್ಷವೂ ಬಾಗಿನ ಅರ್ಪಿಸುವ ಸಂಪ್ರದಾಯ ರೂಢಿಸಿಕೊಂಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಶಿವಾಜಿ ಬನವಾಸಿ, ಸಿ.ಎಫ್. ನಾಯ್ಕ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯವಸ್ಥಿತವಾಗಿ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌
ಉದ್ಯೋಗ ಖಾತ್ರಿ ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರದ ಕ್ರಮಕ್ಕೆ ಶಾಸಕ ಮಾನೆ ಆಕ್ರೋಶ