ಕಾಂಗ್ರೆಸ್ ವಲಯದಲ್ಲಿ ಅಸಮಧಾನ ಸ್ಪೋಟ

KannadaprabhaNewsNetwork | Published : Sep 25, 2024 12:49 AM

ಸಾರಾಂಶ

ಹಾಲಿ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಕೂಡ ಬಹಿರಂಗವಾಗಿಯೇ ಜೆಡಿಎಸ್ ಪರ ಮತ ಹಾಕಿಸಿದ್ದು, ಪಕ್ಷ ವಿರೋಧಿಗಳಿಗೆ ಮಣೆ ಹಾಕಲಾಗುತ್ತದೆ ಎಂದು ಕಾರ್ಯಕರ್ತರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ.

ಕನ್ನಡಪ್ರಭ ವಾರ್ತೆ ರಾಯಚೂರು

ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ನಿಷ್ಠಾವಂತರಿಗೆ ಅನ್ಯಾಯವಾಗುತ್ತಿದ್ದು, ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿರುವವರಿಗೆ ಮಣೆ ಹಾಕಲಾಗಿದೆ ಎಂದು ನಿಷ್ಠಾವಂತ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಸ್ಥಳೀಯ ಡಿಸಿಸಿ ಕಚೇರಿಯಲ್ಲಿ ಪಕ್ಷದ ಸಚೇತಕ ಸಲೀಂ ಅಹ್ಮದ್ ಉಪಸ್ಥಿತಿಯ ಸಭೆಯಲ್ಲಿ ಘಟನೆ ಜರುಗಿದೆ. ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ನೀಡಿದ್ದ ಎಪಿಎಂಸಿ ಪದಾಧಿಕಾರಿಗಳ ಪಟ್ಟಿಗೆ ರಾಜ್ಯ ಘಟಕ ಸಮ್ಮತಿ ನೀಡಿ ನೇಮಕಮಾಡಲಾಗಿತ್ತು. ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಟ್ಟಿಯನ್ನು ಬದಲಾವಣೆ ಮಾಡಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬಹಿರಂಗವಾಗಿ ಮತ ಹಾಕಿಸಿರುವ ಆದನಗೌಡ ಪಾಟೀಲ್‌ರಿಗೆ ಅಧ್ಯಕ್ಷ ಪದವಿ ನೀಡಿದ್ದಾರೆ. ಈಗಾಗಲೇ ಇವರೇ ಕಾಂಗ್ರೆಸ್ ಅಧ್ಯಕ್ಷರಿದ್ದಾರೆ. ಹಾಲಿ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಕೂಡ ಬಹಿರಂಗವಾಗಿಯೇ ಜೆಡಿಎಸ್ ಪರ ಮತ ಹಾಕಿಸಿದ್ದು, ಪಕ್ಷ ವಿರೋಧಿಗಳಿಗೆ ಮಣೆ ಹಾಕಲಾಗುತ್ತದೆ ಎಂದು ಕಾರ್ಯಕರ್ತರು, ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿದೆ.

ಕೆಲ ಮುಖಂಡರು ಸಭೆ ಪ್ರಾರಂಭವಾಗುವ ಮೊದಲೇ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ್‌ರ ಮೇಲೆ ಮುಗಿಬಿದ್ದು, ಹಿಗ್ಗಾ ಮುಗ್ಗಾ ಜಗಳವಾಗಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರದಾಡುತ್ತಿದೆ. ಚುನಾವಣೆ ಕಳೆದು ವರ್ಷ ಕಳೆದರೂ ತಾಲೂಕಿನಲ್ಲಿ ಒಂದೂ ಸಭೆ ನಡೆಸಿಲ್ಲ. ನಿಷ್ಠಾವಂತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ತಾಪಂ, ಜಿಪಂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಕಡಿಮೆ ಮತಗಳನ್ನು ಪಡೆಯಲಾಗಿದೆ ಎಂದೇ ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ. ಅಭ್ಯರ್ಥಿಗೆ ಮತಗಳು ಕಡಿಮೆಯಾಗಲು ಯಾರು?ಕಾರಣ ಎಂಬುದನ್ನು ಆತ್ಮಾವಲೋಕ ಮಾಡಿಕೊಳ್ಳಬೇಕಾಗಿದೆ. ಕಳೆದ 30-40 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಆದರೆ ಇಟಗಿ ಆಂಡ್ಯ್ ಗ್ಯಾಂಗ್‌ನಿಂದ ಪಕ್ಷ ತಾಲೂಕಿನಲ್ಲಿ ಹೀನಾಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಪಕ್ಷ ಮತ್ತು ಕಾರ್ಯಕರ್ತರ ಪರಿಸ್ತಿತಿಯನ್ನು ತಮ್ಮ ಗಮನಕ್ಕೆ ತಂದಿದ್ದು, ವಾತಾವರಣ ತಿಳಿಗೊಳಿಸಿ ಪಕ್ಷ ಗಟ್ಟಿಗೊಳಿಸಲು ಕ್ರಮಕೈಗೊಳ್ಳಬೇಕೆಂದು ಮುಖಂಡರು ಒತ್ತಾಯಿಸಿದರು.

ಅಪಪ್ರಚಾರ ಕಾರಣ:ವಿಧಾನ ಸಭಾ ಚುನಾವಣೆಯಲ್ಲಿ ದುರುದ್ದೇಶದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು. ಮಾನಸಿಕವಾಗಿ ಕುಗ್ಗುವಂತೆ ಪಕ್ಷದವರೇ ನಡೆದುಕೊಂಡರು ಎಂದು ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ಸಭೆಗೆ ಮಾಹಿತಿ ನೀಡಿದ್ದು, ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ಸಚೇತಕ ಸಲೀಂ ಅಹ್ಮದ್ ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

4ಸಲ ಎಂಪಿ, ಒಮ್ಮೆ ಎಂಎಲ್ಎ ಆಗಿ ಜನಸೇವೆ ಮಾಡಿರುವ ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಎ.ವೆಂಕಟೇಶನಾಯಕರ ಮೊಮ್ಮಗಳು ನಾನು. ನಮ್ಮ ಉಸಿರು ಕಾಂಗ್ರೆಸ್. ಆದರೆ ನಾವು ಸತ್ತರೂ ದ್ರೋಹ ಬಗೆಯವರಲ್ಲ. ಹಣಕಾಸಿನ ತೊಂದರೆ ಹಾಗೂ ಫೇಸ್ ಬುಕ್, ವ್ಯಾಟ್ಸಪ್‌ಗಳಲ್ಲಿ ಕೆ.ಶಿವನಗೌಡ ನಾಯಕ ಬಂಧುವಾಗಿರುವದರಿಂದ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಪಕ್ಷದ ಕುತಂತ್ರಿಗಳಿಂದ ನನಗೆ ಸೋಲಾಗಿದೆ. ಸೋಲಿನ ಹತಾಶೆಯಿಂದ ಮನೆಯಲ್ಲಿ ಕೂಡದೇ, ಪಕ್ಷದ ಸಂಘಟನೆಗೆ, ನಿಷ್ಠಾವಂತರಿಗೆ ನ್ಯಾಯ ಕೊಡಿಸುವ ನಿಮಿತ್ತ ಸಕ್ರಿಯವಾಗಿ ಚಟುವಟಿಕೆಯಲ್ಲಿದ್ದೇನೆ. ಆದರೆ ಇತ್ತೀಚಿನ ಬೆಳವಣಿಗೆಗಳು ಬೇಸರ ಮೂಡಿಸಿದೆ ಎಂದು ಭಾವನಾತ್ಮಕವಾಗಿ ಸಭೆಯಲ್ಲಿ ಶ್ರೀದೇವಿ ನಾಯಕ ಸ್ಪಷ್ಟತೆ ನೀಡಿದರು.

ರಾಜ್ಯ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವದು ಎಂದು ಸಚೇತಕ ಸಲೀಂ ಅಹ್ಮದ್ ಸಮಾಧಾನ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಈ ಸಂದರ್ಭದಲ್ಲಿ ಮುಖಂಡರಾದ ಗಂಗಪ್ಪಯ್ಯ ಪೂಜಾರಿ ಮಾನಸಗಲ್, ಶರಣಪ್ಪ ಹಿರೇರಾಯಕುಂಪಿ, ಉಸ್ಮಾನಸಾಬ್ ಖಾನಾಪೂರ, ಬೀಮರೆಡ್ಡಿ ನಾಯಕ ಮಲದಕಲ್, ಬಸಲಿಂಗಪ್ಪ, ತಿಮ್ಮಣ್ಣ ಎನ್.ಗಣೇಕಲ್, ಸಾಬಣ್ಣ ಗಾಣದಾಳ ಹಾಗೂ ಇತರರು ಇದ್ದರು.

Share this article