ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಭೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ಇನ್ ಪುಟ್ ಸಬ್ಸಿಡಿ ರೂಪದಲ್ಲಿ ರಾಜ್ಯ ಸರ್ಕಾರ ಇದುವರೆಗೆ 114.78 ಕೋಟಿ ರುಪಾಯಿ ಪರಿಹಾರ ವಿತರಣೆ ಮಾಡಿದೆ. ಚಿತ್ರದುರ್ಗ ಜಿಲ್ಲೆಯ 1,31,776 ರೈತ ಖಾತೆಗೆ ಡಿಬಿಡಿ ಮೂಲಕ ನೇರ ಪಾವತಿ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಪ್ರಸ್ತುತ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಅರ್ಹತೆಯ ಅನುಸಾರ ಅರ್ಹ ರೈತರಿಗೆ ಗರಿಷ್ಠ ರು.2000 ರವರೆಗೆ ಪರಿಹಾರ ಮೊತ್ತ ಪಾವತಿಸಿರುವುದನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ (ಇನ್‍ಪುಟ್ ಸಬ್ಸಿಡಿ) ಮೊತ್ತವನ್ನು ಸರ್ಕಾರದಿಂದ ಡಿಬಿಟಿ ಮೂಲಕ ವಿತರಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ 2,40,256 ಹೆಕ್ಟೇರು ಪ್ರದೇಶದಲ್ಲಿ ಖುಷ್ಕಿ, ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ಇದರಲ್ಲಿ ಚಳ್ಳಕೆರೆ ತಾಲೂಕಿನಲ್ಲಿ 80130 ಹೆಕ್ಟೇರು, ಚಿತ್ರದುರ್ಗದಲ್ಲಿ 44066 ಹೆಕ್ಟೇರು, ಹಿರಿಯೂರಿನಲ್ಲಿ 32266 ಹೆಕ್ಟೇರು, ಹೊಳಲ್ಕೆರೆಯಲ್ಲಿ 24993 ಹೆಕ್ಟೇರು, ಹೊಸದುರ್ಗದಲ್ಲಿ 36003 ಹೆಕ್ಟೇರು ಹಾಗೂ ಮೊಳಕಾಲ್ಮುರು ತಾಲೂಕಿನಲ್ಲಿ22837 ಹೆಕ್ಟೇರು ಬೆಳೆ ಹಾನಿಯಾಗಿತ್ತು. ಒಟ್ಟು 144769 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು.ಚಿತ್ರದುರ್ಗ ತಾಲೂಕಿನ 32172 ರೈತರಿಗೆ 25.11 ಕೋಟಿ ರು., ಚಳ್ಳಕೆರೆಯ 28804 ರೈತರಿಗೆ 32.27 ಕೋಟಿ ರು., ಹಿರಿಯೂರಿನ 11156 ಮಂದಿ ರೈತರಿಗೆ 9.95 ಕೋಟಿ , ಹೊಳಲ್ಕೆರೆಯ 25247 ಮಂದಿ ರೈತರಿಗೆ 19.85 ಕೋಟಿ ರು., ಹೊಸದುರ್ಗದ 23863 ರೈತರಿಗೆ 18.01 ಕೋಟಿ ಹಾಗೂ ಮೊಳಕಾಲ್ಮುರು ತಾಲೂಕಿನ 10534 ಮಂದಿ ರೈತರಿಗೆ 9.71 ಕೋಟಿ ರು. ಸೇರಿದಂತೆ ಒಟ್ಟು 114.78 ಕೋಟಿ ರು. ಬೆಳೆ ಪರಿಹಾರ ವಿತರಿಸಲಾಗಿದೆ.
ಬೆಳೆ ಪರಿಹಾರ ಪಾವತಿ ಸಂಬಂಧ ಮಾಹಿತಿ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ 6 ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.ಪರಿಹಾರ ಹಣ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ ಸಂಖ್ಯೆ 08194-222538, ಉಪ ವಿಭಾಗಾಧಿಕಾರಿಗಳ ಕಚೇರಿ 08194-200342 ಹಾಗೂ ಚಿತ್ರದುರ್ಗ ತಾಲ್ಲೂಕು ಕಚೇರಿ 08194-222416, ಚಳ್ಳಕೆರೆ 08195-250648, ಹಿರಿಯೂರು 08193-263226 ಹೊಸದುರ್ಗ 08199-295058, ಹೊಳಲ್ಕೆರೆ 08191-200013, ಮೊಳಕಾಲ್ಮೂರು ತಾಲ್ಲೂಕು ಕಚೇರಿ 08198-229234 ಗೆ ಕರೆ ಮಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.