ಇಂದು 17,771 ಕುಟುಂಬಗಳಿಗೆ ಸೌಲಭ್ಯಗಳ ವಿತರಣೆ

KannadaprabhaNewsNetwork |  
Published : Nov 30, 2026, 03:00 AM IST
ಡಿ.ಕೆ.ಶಿವಕುಮಾರ್‌  | Kannada Prabha

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಬರೋಬ್ಬರಿ 17,771 ಕುಟುಂಬಗಳಿಗೆ 352.81 ಕೋಟಿ ರು. ಆರ್ಥಿಕ ಗುರಿಯೊಂದಿಗೆ ನೆರವಾಗುವ ಬೃಹತ್ ‘ಜನ ಕಲ್ಯಾಣ ಮಹೋತ್ಸವ’ವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಅರಮನೆ ಮೈದಾನದಲ್ಲಿ ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿನ ಬರೋಬ್ಬರಿ 17,771 ಕುಟುಂಬಗಳಿಗೆ 352.81 ಕೋಟಿ ರು. ಆರ್ಥಿಕ ಗುರಿಯೊಂದಿಗೆ ನೆರವಾಗುವ ಬೃಹತ್ ‘ಜನ ಕಲ್ಯಾಣ ಮಹೋತ್ಸವ’ವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಅರಮನೆ ಮೈದಾನದಲ್ಲಿ ಉದ್ಘಾಟಿಸಲಿದ್ದಾರೆ.

ಎಲ್ಲರನ್ನು ಒಳಗೊಳ್ಳುವ, ಕಾಳಜಿಯುಳ್ಳ ಮತ್ತು ಸಬಲೀಕೃತ ನಗರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಸಮಾಜದ ಬಡ, ಹಿಂದುಳಿದ ಮತ್ತು ದುರ್ಬಲ ವರ್ಗದವರನ್ನು ಬೆಂಬಲಿಸುವ ಗುರಿಯೊಂದಿಗೆ ರೂಪಿಸಿರುವ 10 ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಸೌಕರ್ಯಗಳನ್ನು ವಿತರಿಸಲಾಗುತ್ತದೆ.

ಕೇವಲ ಕಲ್ಯಾಣ ಸವಲತ್ತುಗಳ ವಿತರಣಾ ಕಾರ್ಯಕ್ರಮಕ್ಕಿಂತ ಮಿಗಿಲಾಗಿ, ಬೆಂಗಳೂರಿನ ಬೆಳವಣಿಗೆಯ ಲಾಭವು ಅಗತ್ಯವಿರುವ ಕುಟುಂಬಗಳಿಗೆ ತಲುಪುವಂತೆ ಮಾಡುವ ಸರ್ಕಾರದ ಬದ್ಧತೆಯನ್ನು ಜನ ಕಲ್ಯಾಣ ಮಹೋತ್ಸವ ಪ್ರತಿಬಿಂಬಿಸುತ್ತದೆ. 352.81 ಕೋಟಿ ರು. ಆರ್ಥಿಕ ಗುರಿಯೊಂದಿಗೆ, ಕುಟುಂಬಗಳ ಅತ್ಯಂತ ಪ್ರಮುಖ ಅಗತ್ಯಗಳಾದ ಜೀವನೋಪಾಯ, ಶಿಕ್ಷಣ, ಸಂಚಾರ ವ್ಯವಸ್ಥೆ ಮತ್ತು ವಸತಿಯನ್ನು ಒದಗಿಸುವ ಮೂಲಕ, ಅವರಿಗೆ ಹೆಚ್ಚಿನ ಭದ್ರತೆ, ಸ್ವಾತಂತ್ರ್ಯ ಮತ್ತು ಘನತೆಯ ಬದುಕನ್ನು ಕಲ್ಪಿಸಲು ಈ ಉಪಕ್ರಮವು ಶ್ರಮಿಸುತ್ತದೆ ಎಂದು ಜಿಬಿಎ ತಿಳಿಸಿದೆ.ಜನರು ಸಂಪಾದಿಸಲು, ಬೆಳೆಯಲು ಮತ್ತು ಸ್ವಾವಲಂಬಿಗಳಾಗಲು ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಈ ಉಪಕ್ರಮವು ಹೆಚ್ಚಿನ ಒತ್ತು ನೀಡುತ್ತದೆ. ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಮಾರಾಟದ ಬಂಡಿಗಳು, ಆಟೋರಿಕ್ಷಾಗಳು ಮತ್ತು ಹೊಲಿಗೆ ಯಂತ್ರಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಅರ್ಹ ಫಲಾನುಭವಿಗಳು ಜೀವನೋಪಾಯದ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಬಲಪಡಿಸಿಕೊಳ್ಳಲು ಸಹಾಯ ಮಾಡಲಾಗುತ್ತದೆ. ಜನರ ಆದಾಯ ಗಳಿಕೆಯ ಪ್ರಯತ್ನಗಳಿಗೆ ಬೆಂಬಲ ನೀಡುವ ಮೂಲಕ ಕುಟುಂಬಗಳಿಗೆ ಶಾಶ್ವತ ಪ್ರಯೋಜನಗಳನ್ನು ಒದಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ ಎಂದು ಜಿಬಿಎ ಹೇಳಿದೆ.ಪೌರಕಾರ್ಮಿಕರು ಮತ್ತು ದುಡಿಯುವ ಮಹಿಳೆಯರಿಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ವಿಕಲಚೇತನರಿಗೆ ವಾಹನಗಳು ಮತ್ತು ಎಲೆಕ್ಟ್ರಿಕ್ ವೀಲ್‌ಚೇರ್‌ಗಳು, ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ನೆರವು, ವೃತ್ತಿಪರ ತರಬೇತಿ ಮತ್ತು ವಾಹನ ಚಾಲನಾ ತರಬೇತಿ ಕಾರ್ಯಕ್ರಮಗಳು, ಪ್ರಾಯೋಗಿಕ ಕೌಶಲ್ಯಗಳ ಮೂಲಕ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗುತ್ತದೆ. ಆದಾಯ ಗಳಿಕೆ ಹಾಗೂ ಉದ್ಯಮಶೀಲತೆಗೆ ಹೊಸ ದಾರಿಗಳನ್ನು ತೆರೆಯುತ್ತವೆ ಎಂದು ಜಿಬಿಎ ತಿಳಿಸಿದೆ.35,610 ಅರ್ಜಿ: 5 ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 35,610 ಅರ್ಜಿಗಳು ಸಲ್ಲಿಕೆಯಾಗುವ ಮೂಲಕ ಈ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 17,771 ಫಲಾನುಭವಿಗಳ ಆಯ್ಕೆ ಮಾಡಲಾಗಿದ್ದು, ಸಮಾಜದ ಹಿಂದುಳಿದ ಸಮುದಾಯಗಳು, ಪೌರಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ವಿಕಲಚೇತನರನ್ನು ತಲುಪುತ್ತಿವೆ ಎಂದು ಜಿಬಿಎ ಹೇಳಿದೆ.

-ಬಾಕ್ಸ್-ಎಲ್ಲರ ಸಬಲೀಕರಣ ಗುರಿ: ಸಚಿವ ಕೃಷ್ಣ

ಜನ ಕಲ್ಯಾಣ ಮಹೋತ್ಸವವು ಒಂದು ಸಬಲೀಕರಣದ ಉಪಕ್ರಮವಾಗಿದೆ. ಜನರನ್ನು ಸ್ವಾವಲಂಬಿ ಆಗಿಸುವುದು ಮತ್ತು ಕುಟುಂಬಗಳಿಗೆ ಸುರಕ್ಷಿತ ಭವಿಷ್ಯವನ್ನು ನಿರ್ಮಿಸಿಕೊಳ್ಳಲು ನೆರವಾಗುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ, ಬದಲಿಗೆ ಕುಟುಂಬಗಳು ಸಂಪಾದಿಸುವ, ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಹಾಗೂ ಘನತೆ ಮತ್ತು ಸ್ವಾವಲಂಬನೆಯಿಂದ ಬದುಕುವ ಸಾಮರ್ಥ್ಯದ ಮೇಲೆ ಮಾಡುತ್ತಿರುವ ಹೂಡಿಕೆಯಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ