ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸನ್ನದ್ಧ

KannadaprabhaNewsNetwork |  
Published : May 20, 2025, 01:10 AM ISTUpdated : May 20, 2025, 06:28 AM IST
19ಎಚ್‌ಯುಬಿ24ಹುಬ್ಬಳ್ಳಿ ಗೋಕುಲ ರಸ್ತೆಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನ ನಡೆಯಿತು. | Kannada Prabha

ಸಾರಾಂಶ

ಅವಘಡಗಳನ್ನು ತಡೆಯಲು ಅನುಕೂಲವಾಗುವಂತೆ ಆಪರೇಶನ್ ಅಭ್ಯಾಸ್ ಹೆಸರಿನಲ್ಲಿ ನಗರದ ವಿಮಾನ ನಿಲ್ದಾಣದಲ್ಲಿ ಅಣಕು ಪ್ರದರ್ಶನ ಜರುಗಿಸಲಾಗಿದೆ

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಬಾಹ್ಯ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಆಗುವ ಸಂಭಾವ್ಯ ದಾಳಿ, ಅವಘಡಗಳನ್ನು ತಡೆಯಲು ಅನುಕೂಲವಾಗುವಂತೆ ಆಪರೇಶನ್ ಅಭ್ಯಾಸ್ ಹೆಸರಿನಲ್ಲಿ ನಗರದ ವಿಮಾನ ನಿಲ್ದಾಣದಲ್ಲಿ ಅಣಕು ಪ್ರದರ್ಶನ ಜರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆಪರೇಷನ್ ಅಭ್ಯಾಸ್ ಅಣುಕು ಪ್ರದರ್ಶನದಲ್ಲಿ ಮಾತನಾಡಿದರು.

ಯುದ್ಧದ, ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ಯಾವ ರೀತಿಯಲ್ಲಿ ಜನರ ಜೀವ, ಸಾರ್ವಜನಿಕ ಆಸ್ತಿಪಾಸ್ತಿ, ಮೂಲಸೌಕರ್ಯ ಹಾಗೂ ಇತರ ಸ್ವತ್ತುಗಳನ್ನು ಕಾಪಾಡಲು ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಆ ನಿಟ್ಟಿನಲ್ಲಿ “ಆಪರೇಷನ್ ಅಭ್ಯಾಸ್” ಎಂಬ ಹೆಸರಿನಲ್ಲಿ ವಿಪತ್ತು ನಿರ್ವಹಣೆ ಕುರಿತು ಅಣುಕು ಪ್ರದರ್ಶನ ಆಯೋಜನೆ ಮಾಡಲಾಗಿದೆ. ಕಳೆದ ವಾರ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಅನೀಲ ಡಿಪೋ, ಅನೀಲ ಟ್ಯಾಂಕರ್ ರಕ್ಷಣೆ ಕುರಿತು ಅಣುಕು ಪ್ರದರ್ಶನ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿತ್ತು ಎಂದರು.

ವಿಪತ್ತುಗಳ ಸಂಭವಿಸಿದಾಗ ಯಾವ ರೀತಿಯಲ್ಲಿ ಸ್ಪಂದನೆ ಮಾಡಬೇಕು. ಅಲ್ಲದೇ ತುರ್ತು ಕ್ರಮಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಅರಿತುಕೊಳ್ಳಲು ಈ ಅಣುಕು ಪ್ರದರ್ಶನ ಸಹಾಯಕವಾಗಲಿದೆ. ವಿವಿಧ ಇಲಾಖೆಗಳ ಸಹಕಾರ ಕೂಡ ಅಷ್ಟೇ ಮುಖ್ಯವಾಗುತ್ತದೆ. ರಕ್ಷಣಾ ಕಾರ್ಯದಲ್ಲಿ ಬಳಸುವ ಉಪಕರಣಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಸಹ ಪರಿಶೀಲಿಸಲು ಅಣುಕು ಪ್ರದರ್ಶನ ನೆರವಾಗಲಿದೆ. ಅಲ್ಲದೇ ಅಂಬುಲೆನ್ಸ್, ಹತ್ತಿರದ ಆಸ್ಪತ್ರೆಗಳು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಸೇರಿದಂತೆ ತುರ್ತು ನಿರ್ವಹಣೆ ಕ್ರಮಗಳನ್ನು ಯಾವ ರೀತಿಯಲ್ಲಿ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಅಣುಕು ಪ್ರದರ್ಶನದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾವಿ ಮಾತನಾಡಿ ಅವಘಡಗಳು ನಡೆದ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಡಿಸಿಪಿ ರವೀಶ ಸಿ.ಆರ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕಾರ್ಖಾನೆ ಮತ್ತು ಬೈಲರ್ ಗಳ ಇಲಾಖೆ ಜಂಟಿ ನಿರ್ದೇಶಕ ರವೀಂದ್ರ ರಾಠೋಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ರೂಪೇಶಕುಮಾರ, ವ್ಯವಸ್ಥಾಪಕ ಪ್ರತಾಪ ಬಿ.ವಿ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ವೆಂಕಟೇಶ ಬುಳ್ಳಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ: ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಬಾಹ್ಯ ದಾಳಿ, ಅಗ್ನಿ ಅವಘಡ ಸಂಭವಿಸಿದಾಗ ಪ್ರಯಾಣಿಕರು ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಹೇಗೆ ರಕ್ಷಣೆ ಮಾಡಬೇಕು ಎಂಬುದರ ಕುರಿತು ಆಪರೇಷನ್ ಅಭ್ಯಾಸ್‌ದ ತಾಲೀಮು ನಡೆಯಿತು. ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ ಸಂದರ್ಭವನ್ನು ಸೃಷ್ಟಿಸಿ, ಪ್ರಯಾಣಿಕರನ್ನು ರಕ್ಷಿಸುವ ತಾಲೀಮು ನಡೆಸಲಾಯಿತು. 

ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ಮೊದಲು ಸೈರನ್ ಮೊಳಗಿತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಪ್ರಯಾಣಿಕರ ರಕ್ಷಣೆಗೆ ಮುಂದಾಯಿತು. ಗಾಯಾಳು ಪ್ರಯಾಣಿಕರನ್ನು ಸ್ಟ್ರೆಚರ್‌ ಮೂಲಕ ಆ್ಯಂಬುಲೆನ್ಸ್‌ನಲ್ಲಿ ಹತ್ತಿರವಿರುವ ಆಸ್ಪತ್ರೆಗೆ ರವಾನಿಸಲಾಯಿತು. ನಂತರ ಬೃಹತ್ ಗಾತ್ರದಲ್ಲಿ ಬೆಂಕಿ ಅವಘಡಗಳು ಸಂಭವಿಸಿದಾಗ ಹೇಗೆ ರಕ್ಷಣೆ ಮಾಡಬೇಕು ಎಂಬುದನ್ನು ಪ್ರದರ್ಶನದ ಮೂಲಕ ತಿಳಿಸಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ, ವಿಮಾನ ನಿಲ್ದಾಣ ಸಿಬ್ಬಂದಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಇಲಾಖೆಗಳು ಭಾಗವಹಿಸಿದ್ದವು.

PREV
Read more Articles on