ಧಾರವಾಡ: ಸಮಾಜ ನಮಗೆ ಎಲ್ಲವನ್ನೂ ನೀಡಿದ್ದು, ಅದರ ಋಣ ಸಂದಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು ಅವಶ್ಯಕ ಎಂದು ಜೆಎಸ್ಸೆಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಸವದತ್ತಿ ರಸ್ತೆಯ ಜೆಎಸ್ಸೆಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೈನಮಿಲನ ಧಾರವಾಡ ಸಂಸ್ಥೆಯು ಇತರೆ ಸಂಸ್ಥೆಗಳೊಡನೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜೈನಮಿಲನ್ ಯಾವುದೇ ಜಾತಿ, ಪಂಥಗಳಿಗೆ ಸೀಮಿತಗೊಳಿಸದೇ ಎಲ್ಲರಿಗೂ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಪೂಜ್ಯ ಹೆಗ್ಗಡೆಯವರ ಆಶಯದಂತೆ ಆರೋಗ್ಯ, ಶಿಕ್ಷಣ ಕಟ್ಟ ಕಡೆಯ ಮನುಷ್ಯನಿಗೂ ತಲುಪಬೇಕೆಂಬ ಆಶಯದಂತೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್. ಎಂ. ಹೊನಕೇರಿ ಮಾತನಾಡಿ, ಆಧುನಿಕ ಜೀವನಶೈಲಿ, ಆಹಾರ ಪದ್ಧತಿ ಹಲವಾರು ರೋಗಗಳಿಗೆ ಕಾರಣವಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು, ಆಗಾಗ ನಿಯಮಿತ ರೋಗ ತಪಾಸಣೆೆಯಿಂದ ಆರೋಗ್ಯಮಯ ಜೀವನ ನಡೆಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಡಾ. ಉಮೇಶ್ ಹಳ್ಳಿಕೇರಿ ಮಾತನಾಡಿ, ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಉಂಟಾಗಬೇಕು. ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ವೀರಾಪುರ ಮಾತನಾಡಿದರು. ಕಣ್ಣಿನ ತಪಾಸಣೆ, ರಕ್ತದೊತ್ತಡ, ರಕ್ತ ಪರೀಕ್ಷೆ, ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಮಾಡಲಾಯಿತು. ಒಟ್ಟು 212 ಜನ ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಜೆಎಸ್ಸೆಸ್‌ಗೆ ನೂತನವಾಗಿ ಆಡಳಿತ ಅಧಿಕಾರಿಯಾಗಿ ನೇಮಕವಾದ ಅರಿಹಂತ ಪ್ರಸಾದ ಅವರನ್ನು ಜೈನ ಮಿಲನದ ಪರವಾಗಿ ಸನ್ಮಾನಿಸಲಾಯಿತು .ಈನ ಸಂಕೀರ್ತನ ಭಜನಾ ಮಂಡಳಿ ಸದಸ್ಯೆಯರಿಂದ ಣಮೋಕಾರ ಮಂತ್ರ ಪಠಿಸಲಾಯಿತು. ಲಕ್ಷ್ಮಿ ಹಿರೇಮಠ, ಡಾ. ಜಿನ್ನಪ್ಪ ಕುಂದಗೋಳ, ಮೋಹನ್ ಗೋಗಿ, ಎ.ಎ. ಬಾಳೆಕಾಯಿ, ತ್ರಿವೇಣಿ ಆರ್, ಡಾ. ಬಿ.ಎನ್. ಭಾವಿ, ಸುಜಾತ ಹಡಗಲಿ, ಡಾ. ಚಕ್ರಸಾಲಿ ಇದ್ದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು, ಮಹಾವೀರ ಉಪಾದ್ಯೆ ಸ್ವಾಗತಿಸಿದರು. ಸೋನಾಲಿ ಗೋಗಿ ಪ್ರಾರ್ಥಿಸಿದರು. ರತ್ನಾಕರ ಹೋಳಗಿ ವಂದಿಸಿದರು.