ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಶನಿವಾರ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಗ್ರಾಹಕ ಆಯೋಗದ ಸಂಯುಕ್ತಾಶ್ರಯದಲ್ಲಿ ನಡೆದ ನೂತನ ‘ಮಧ್ಯಸ್ಥಿಕೆ ಕೇಂದ್ರ’ ಉದ್ಘಾಟಿಸಿ ಮಾತನಾಡಿ, ಗ್ರಾಹಕರು ವಿವಿಧ ಸೇವೆಗಳಲ್ಲಿ ಅನುಭವಿಸುವ ತೊಂದರೆಗಳಿಗೆ ನ್ಯಾಯ ಒದಗಿಸುವುದು ನಮ್ಮ ಆದ್ಯತೆ. ಅದರಲ್ಲೂ ವಿಶೇಷವಾಗಿ ವಿಮಾ ಕಂಪನಿಗಳು ಸಣ್ಣಪುಟ್ಟ ತಾಂತ್ರಿಕ ಕಾರಣ ನೀಡಿ ವಿಮಾ ಮೊತ್ತ ನಿರಾಕರಿಸುವ ಪ್ರವೃತ್ತಿ ತಡೆಗಟ್ಟಬೇಕಿದೆ ಎಂದರು.
ಆನ್ಲೈನ್ ಮಾರುಕಟ್ಟೆಯಲ್ಲಿ ‘ಬೈ ಒನ್ ಗೆಟ್ ಒನ್ ಫ್ರೀ’ ಎನ್ನುವಂತಹ ಆಮಿಷ ಸಾಮಾನ್ಯವಾಗುತ್ತಿವೆ. ಇಂತಹ ವಾಣಿಜ್ಯೀ ಕರಣ ವೈದ್ಯಕೀಯ ಕ್ಷೇತ್ರಕ್ಕೂ ವ್ಯಾಪಿಸಬಾರದು. ಒಂದು ಶಸ್ತ್ರಚಿಕಿತ್ಸೆ ಮಾಡಿದರೆ ಮತ್ತೊಂದು ಉಚಿತ ಎನ್ನುವಂತಹ ಬೇಜವಾಬ್ದಾರಿತನ ರೋಗಿಗಳ ಜೀವಕ್ಕೆ ಸಂಚಕಾರ ತರಬಾರದು ಎಂದು ಎಚ್ಚರಿಸಿದರು.ಶಸ್ತ್ರಚಿಕಿತ್ಸೆ ವೇಳೆ ರೋಗಿಗಳ ಹೊಟ್ಟೆಯಲ್ಲಿ ಕತ್ತರಿ ಮತ್ತು ಹತ್ತಿ ಬಿಟ್ಟು ಹೊಲಿಗೆ ಹಾಕಿದ ಆಘಾತಕಾರಿ ಪ್ರಕರಣ ಉಲ್ಲೇಖಿಸಿ ‘ಮಂಡ್ಯ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದರು. ಈ ಸಂಬಂಧ ಆಯೋಗ ₹25 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ ಎಂದು ಸ್ಪಷ್ಟಪಡಿಸಿದರು.ಉದ್ಘಾಟನೆಗೊಂಡ ‘ಮಧ್ಯಸ್ಥಿಕೆ ಕೇಂದ್ರ’ ಗ್ರಾಹಕರು ಮತ್ತು ಕಂಪನಿಗಳ ನಡುವಿನ ಬಿಕ್ಕಟ್ಟನ್ನು ಪರಸ್ಪರ ಮಾತುಕತೆ ಮೂಲಕ, ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಹಕಾರಿ. ಇದರಿಂದ ಸುದೀರ್ಘ ವರ್ಷಗಳ ಕಾಲ ನಡೆಯುವ ಕಾನೂನು ಹೋರಾಟ ಮತ್ತು ಹಣದ ವ್ಯಯ ತಪ್ಪಿಸಬಹುದು ಎಂದು ತಿಳಿಸಿದರು.ಚಿಕ್ಕಮಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಸಂವಿಧಾನದ ವಿಧಿ 39(ಎ) ಅಡಿ ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕೆಂಬ ಆಶಯವಿದೆ. ಯಾರೊಬ್ಬರೂ ನ್ಯಾಯದಿಂದ ವಂಚಿತ ರಾಗ ಬಾರದು ಎಂದು ಪ್ರತಿಪಾದಿಸಿದರು. ಗ್ರಾಹಕರಿಗೆ ಮೋಸವಾದಾಗ ಅಥವಾ ಸೇವಾ ನ್ಯೂನತೆಗೆ ಕಾನೂನು ಪರಿಹಾರ ಕಂಡುಕೊಳ್ಳಲು ಅರಿವು ಅತ್ಯಗತ್ಯ. ಹೆಚ್ಚಿನ ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅಥವಾ ಹೇಗೆ ಪರಿಹಾರ ಪಡೆಯ ಬೇಕು ಎಂಬ ಬಗ್ಗೆ ಸೂಕ್ತ ಜ್ಞಾನವಿಲ್ಲದಿರುವುದು ವಿಷಾದನೀಯ ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್.ಚೆನ್ನಕೇಶವ, ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ಹಾಗೂ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಈ.ಪ್ರೇಮ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಉಪಸ್ಥಿತರಿದ್ದರು.