ಕನ್ನಡಪ್ರಭ ವಾರ್ತೆ ತುರುವೇಕೆರೆ
ಒಳ ಮೀಸಲಾತಿ ನೀಡುವಲ್ಲಿ ಉದ್ಭವವಾಗಿರುವ ಅನುಮಾನವನ್ನು ಪರಿಹರಿಸುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ರಾಜ್ಯದಲ್ಲಿರುವ ಪ್ರತಿ ದಲಿತ ಸಮುದಾಯದ ಮನೆಗಳಿಗೆ ತೆರಳಿ ಜಾತಿ ಸಮೀಕ್ಷೆ ಮಾಡಲಿದೆ. ಆ ವೇಳೆ ದಲಿತ ಸಮುದಾಯಕ್ಕೆ ಸೇರಿರುವವರು ತಮ್ಮ ಮೂಲ ಜಾತಿಯಾಗಿರುವ ಹೊಲೆಯ ಅಥವಾ ಮಾದಿಗ ಎಂಬ ಜಾತಿಯನ್ನು ಮಾತ್ರ ಸಮೀಕ್ಷೆದಾರರಿಗೆ ತಿಳಿಸಬೇಕೆಂದು ತಾಲೂಕು ಭೀಮೋತ್ಸವ ಸಮಿತಿಯ ಅಧ್ಯಕ್ಷ ನೆಮ್ಮದಿಗ್ರಾಮ ಮೂರ್ತಿ ಜಿಲ್ಲೆಯ ಹಾಗೂ ತಾಲೂಕಿನ ತಮ್ಮ ಸಮುದಾಯದವರಿಗೆ ಮನವಿ ಮಾಡಿಕೊಂಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ಎರಡು ಭೇದಗಳಿವೆ. ಅವುಗಳಲ್ಲೂ ಹಲವಾರು ಉಪ ಜಾತಿಗಳು ಇವೆ. ಅವೆಲ್ಲವನ್ನೂ ಬದಿಗೊತ್ತಿ ತಮ್ಮ ಮೂಲ ಜಾತಿಯಾಗಿರುವ ಮಾದಿಗ ಅಥವಾ ಹೊಲೆಯ ಎಂಬ ಎರಡೇ ಜಾತಿಗಳನ್ನು ನಮೂದಿಸಬೇಕು. ಯಾರೂ ಸಹ ಹಿಂಜರಿಕೆ ಮಾಡದೇ ತಮ್ಮ ಜಾತಿಯನ್ನು ನಮೂದಿಸುವ ಮೂಲಕ ಒಳ ಮೀಸಲಾತಿಯಲ್ಲಿ ಉದ್ಭವಿಸಿರುವ ಗೊಂದಲವನ್ನು ನಿವಾರಿಸಬಹುದಾಗಿದೆ ಎಂದು ಅವರು ತಿಳಿಸಿದರು. ಈ ದೇಶದ ಮೂಲಜರಾಗಿರುವ ನಾವು ನಮ್ಮ ಜಾತಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಇದರಲ್ಲಿ ಮುಜುಗರ ಪಡುವ ಅವಶ್ಯಕತೆ ಇಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಎಸ್ ಸಿ ಗಳದ್ದೇ ಒಂದೊಂದು ಕಾಲೋನಿಗಳಿರುತ್ತವೆ. ಸಮೀಕ್ಷೆ ಮಾಡುವವರಿಗೆ ಗೊಂದಲ ಆಗದು. ಆದರೆ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಎಲ್ಲಾ ಬಡಾವಣೆಗಳಲ್ಲಿ ನಮ್ಮ ಸಮುದಾಯದವರು ವಾಸವಿದ್ದಾರೆ. ಅವರಿಗೆ ತಮ್ಮ ಜಾತಿ ಹೇಳಿಕೊಳ್ಳುವುದು ಮುಜುಗರ ಉಂಟು ಆಗಬಹುದು. ಅಲ್ಲದೇ ಸಮೀಕ್ಷೆದಾರರಿಗೂ ಮನೆಗಳನ್ನು ಪತ್ತೆ ಹಚ್ಚಲು ತೊಂದರೆಯಾಗಬಹುದು. ಅಂತಹ ಸಂದರ್ಭದಲ್ಲಿ ಗ್ರಾಮ ಸಹಾಯಕರ ಅಥವಾ ನಮ್ಮ ಸಮುದಾಯದ ಮುಖಂಡರನ್ನು ಭೇಟಿಯಾಗಿ ವಿವರ ನೀಡಬೇಕೆಂದು ನೆಮ್ಮದಿಗ್ರಾಮ ಮೂರ್ತಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದಲೂ ನಮ್ಮ ಹಕ್ಕನ್ನು ಪಡೆಯಲು ಹೋರಾಡುತ್ತಿದ್ದೇವೆ. ಇಂದು ಅಂತಿಮ ಹಂತ ತಲುಪಿದೆ. ನಮ್ಮ ಹಕ್ಕನ್ನು ಪಡೆಯಲು ಎಲ್ಲಾ ದಲಿತ ಸಮುದಾಯದ ಎಲ್ಲಾ ಉಪಜಾತಿಗಳೆಲ್ಲರೂ ಒಂದಾಗ ಬೇಕಿದೆ ಎಂದು ಡಿಎಸ್ಎಸ್ ತಾಲೂಕು ಸಂಚಾಲಕ ದಂಡಿನಶಿವರ ಕುಮಾರ್ ಹೇಳಿದರು.ರಾಜ್ಯದಲ್ಲಿ ಆದಿ ಕರ್ನಾಟಕ ಮತ್ತು ಆದಿ ದ್ರಾವಿಡ ಎಂಬ ಪಂಗಡಗಳಿವೆ. ಅವುಗಳು ಕೆಲವು ಪ್ರಾಂತ್ಯಗಳಲ್ಲಿ ಬದಲಾಗಿವೆ. ತುಮಕೂರು, ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಒಂದು ರೀತಿ ಇದ್ದರೆ, ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ವ್ಯತ್ಯಾಸ ಇದೆ. ಇದು ಜಾತಿ ಸಮೀಕರಣ ವೇಳೆ ಸಮೀಕ್ಷೆದಾರರಿಗೆ ಗೊಂದಲ ಉಂಟಾಗಲಿದೆ. ಅಲ್ಲದೇ ಅಂತಿಮವಾಗಿ ಒಟ್ಟಾರೆ ಜನಸಂಖ್ಯೆ ಕ್ರೋಢೀಕರಣ ವೇಳೆ ಸರ್ಕಾರಕ್ಕೆ ತೀರ್ಮಾನ ಕೈಗೊಳ್ಳಲು ಕಷ್ಟವಾಗಲಿದೆ. ಹಾಗಾಗಿ ಎಲ್ಲರೂ ತಮ್ಮ ಮೂಲ ಜಾತಿಯಾಗಿರುವ ಮಾದಿಗ ಮತ್ತು ಹೊಲೆಯ ಎಂಬ ಎರಡೇ ಜಾತಿಗಳನ್ನು ಮಾತ್ರ ನಮೂದಿಸಬೇಕೆಂದು ಅಂಬೇಡ್ಕರ್ ವಾದ ಸಂಘಟನೆಯ ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಡೊಂಕಿಹಳ್ಳಿ ರಾಮಯ್ಯ, ಮಲ್ಲೂರು ತಿಮ್ಮೇಶ್, ಕುಣಿಕೇನಹಳ್ಳಿ ಜಗದೀಶ್, ಶ್ರೀನಿವಾಸ್, ಹೊನ್ನೇನಹಳ್ಳಿ ಕೃಷ್ಣ, ಪುಟ್ಟರಾಜು, ಹೆಗ್ಗೆರೆ ನರಸಿಂಹಯ್ಯ, ರಾಯ, ಮಹದೇವಯ್ಯ, ಮುನಿಯೂರು ರಂಗಸ್ವಾಮಿ, ಡಾ.ಚಂದ್ರಯ್ಯ, ಪ್ರಸನ್ನ ಕುಮಾರ್, ಶಂಕರಪ್ಪ, ಸಾಸಲು ಕೃಷ್ಣಮೂರ್ತಿ, ಗುಡ್ಡೇನಹಳ್ಳಿ ಶಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.