ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿ ಪ್ರತಿಯೊಬ್ಬರು ಶಾಂತಿ- ನೆಮ್ಮದಿಯಿಂದಿರಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುವ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಪೊಲಿಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ನೊಂದವರಿಗೆ ಭರವಸೆ ನೀಡುವುದು ಪೊಲೀಸ್ ಕಾರ್ಯವೈಖರಿ. ಪ್ರತಿಯೊಂದು ಹಂತದಲ್ಲಿ ಪೊಲೀಸರ ಅವಶ್ಯಕತೆ ಇದೆ. ನೆಮ್ಮದಿಯ ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೊಲೀಸರ ಕರ್ತವ್ಯ ಮೆಚ್ಚುವಂತದ್ದು ಎಂದು ಹೇಳಿದರು.
ವಿಪತ್ತು-ಆಪತ್ತು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡುವ ಇವರ ಕಾರ್ಯ ಅತ್ಯಂತ ಮಹತ್ವದ್ದು. ಜಿಲ್ಲೆಯ ಪೊಲೀಸರ ಕಾರ್ಯದಕ್ಷತೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಷ್ಟಕರ ಸಂದರ್ಭಗಳಲ್ಲಿ ತತ್‌ಕ್ಷಣ ಸ್ಪಂದಿಸಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಾರೆ. ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಸೇರಿದಂತೆ ಜಿಲ್ಲೆಯ ನಾಲ್ಕು ಜನ ಪೊಲೀಸರು ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಸಿಇಒ ರಿಷಿ ಆನಂದ ಮಾತನಾಡಿ, ಜಿಲ್ಲೆಯ ಕಾನೂನು ಸುವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಪೊಲೀಸರ ಕಾರ್ಯ ಬಹುಮುಖ್ಯ. ಇದರಿಂದ ಸಮಾಜದಲ್ಲಿ ಶಿಸ್ತು ಬದ್ಧ ಜೀವನ ನಡೆಸಲು, ಸಾರ್ವಜನಿಕರು ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ. ಅಪರಾಧ ತಡೆ, ಸಂಚಾರಿ ನಿಯಮಗಳ ಉಲ್ಲಂಘನೆ ಸೇರಿದಂತೆ ಯಾವುದೇ ಅಪರಾಧ ತಡೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಪೊಲೀಸ್ ಸೇವೆ ಸ್ವರೂಪ ಗಮನಾರ್ಹ ಬದಲಾವಣೆಯಾಗಿದ್ದು, ತಂತ್ರಜ್ಞಾನದ ಬಳಕೆಯಿಂದ ಅಪರಾಧಗಳ ಪ್ರಕರಣಗಳನ್ನು ಬೇಧಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ, ಧ್ವಜಗಳ ಮಾರಾಟದಿಂದ ಸಂಗ್ರಹವಾದ ವಂತಿಗೆಯನ್ನು ನಿವೃತ್ತ ಮತ್ತು ಸೇವಾ ನಿರತ ಪೊಲೀಸ್‌ರ ಕ್ಷೇಮಾಭಿವೃದ್ದಿಗೆ ಬಳಸಿಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಪೊಲೀಸರ ಸಲುವಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸುವಿಧಾ ಗ್ಯಾಸ್ ಏಜೆನ್ಸಿ, ಪೊಲೀಸ್ ಬ್ಯಾಡ್ಮಿಂಟನ್, ಶೆಟಲ್ ಕೋಟ್, ವ್ಯಾಯಾಮ ಶಾಲೆ, ಗ್ರಂಥಾಲಯ, ಪೊಲೀಸ್ ಕ್ಯಾಂಟೀನ್, ಪೊಲೀಸ್ ಸಿಬ್ಬಂದಿ ತಂಗುದಾಣ, ಶುದ್ಧ ಕುಡಿಯುವ ನೀರಿನ ಘಟಕ, ಪೊಲೀಸ್ ಸಮುದಾಯ ಭವನ, ಆರೋಗ್ಯ ಶಿಬಿರ ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ನಿವೃತ್ತ ಪೊಲೀಸ್ ನಿರೀಕ್ಷಕ ಎನ್.ಎಸ್.ಜನಗೌಡ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಆಕರ್ಷಕ ಪಥಸಂಚಲನ: ಪರೇಡ್ ಕಮಾಂಡರ್ ವಿಠ್ಠಲ ಕೊಕಟನೂರ ನೇತೃತ್ವದಲ್ಲಿ ಆರ್.ಎಸ್.ಐ ಮಲ್ಲನಗೌಡ ಗುತ್ತರಗಿ, ದಾನೇಶ ಕಲ್ಯಾಣಿ, ಚಿದಾನಂದ ತಳವಾರ, ಕೂಡಗಿ ಪೊಲೀಸ್ ಠಾಣೆ ಪಿಎಸ್‌ಐ ಯತೀಶ ಕೆ.ಎನ್, ಕಲಕೇರಿ ಪಿಎಸ್‌ಐ ಸುರೇಶ ಮಂಟೂರ, ಬಬಲೇಶ್ವರ ಠಾಣೆ ಪಿಎಸ್‌ಐ ಅಶೋಕ ನಾಯಕ, ಝಳಕಿ ಪಿಎಸ್‌ಐ ಮಂಜುನಾಥ ಪಾಟೀಲ, ದೇವರಹಿಪ್ಪರಗಿ ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ, ಗಾಂಧಿಚೌಕ್ ಠಾಣೆ ಪಿಎಸ್‌ಐ ಸುಷ್ಮಾ ನಂದಗೋಳ, ಗೋಲಗುಂಬಜ್ ಪಿಎಸ್‌ಐ ಎಂ.ಡಿ.ಗೋರಿ ಒಳಗೊಂಢ ೧೦ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಅರ್ಜುನ ಭಜಂತ್ರಿ ಹಾಗೂ ಮಾನೆ ನೇತೃತ್ವದ ತಂಡ ಬ್ಯಾಂಡ್ ನುಡಿಸಿದರು. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಮಲ್ಲೇಶ, ಐಆರ್‌ಬಿ ಕಮಾಂಡೆಂಟ್ ಪ್ರಸನ್ನಕುಮಾರ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸೇರಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಎಚ್.ಎ.ಮಮದಾಪುರ ನಿರ್ವಹಿಸಿದರು.----
ಕೋಟ್ಈ ದಿನ ಹೆಚ್ಚು ಶ್ರದ್ಧಾಪೂರ್ವಕವಾಗಿ, ರಚನಾತ್ಮಕವಾಗಿ ಮತ್ತು ನಿಷ್ಠೆಯೊಂದಿಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಸೇವೆಯಲ್ಲಿನ ಪೊಲೀಸ್ ಸಿಬ್ಬಂದಿ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ನಮ್ಮ ಸಂಕಲ್ಪವನ್ನು ಮತ್ತಷ್ಟು ದೃಢಪಡಿಸಿಕೊಳ್ಳುವುದಾಗಿದೆ. ಇಲಾಖೆಯಲ್ಲಿ ಅನೇಕ ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪೊಲೀಸರ ಸೇವೆ, ತ್ಯಾಗ ಮನೋಭಾವ ಗೌರವಿಸುವುದೇ ನಮ್ಮ ಉದ್ದೇಶ.
ಲಕ್ಷ್ಮಣ ನಿಂಬರಗಿ, ಪೊಲೀಸ್ ವರಿಷ್ಠಾಧಿಕಾರಿ------