ಆಶ್ರಯ ಮನೆಗಾಗಿ ದುಡ್ಡು ನೀಡದಿರಿ: ಶಾಸಕ ದೇಶಪಾಂಡೆ ಮನವಿ

KannadaprabhaNewsNetwork | Published : Jan 28, 2025 12:45 AM

ಸಾರಾಂಶ

ನಾನು ಮನವಿ ಮಾಡಿದ್ದರೂ ಸಹಕರಿಸದೇ ಭ್ರಷ್ಟಾಚಾರಕ್ಕೆ ಕೈಯೊಡ್ಡಿದ್ದರೆ ಅವರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು. ಸಾರ್ವಜನಿಕ ಜೀವನದಲ್ಲಿ ಸಹಾಯ ಮಾಡುವ ಆಪೇಕ್ಷೆ ಹೊಂದಿದವರು ಏನನ್ನೂ ನಿರೀಕ್ಷಿಸಲೇಬಾರದು.

ಹಳಿಯಾಳ: ನನ್ನ ಒಳ್ಳೆಯತನದ ದುರುಪಯೋಗವನ್ನು ಪಡೆಯಲಾಗುತ್ತಿದ್ದು, ಮನೆ ವಿತರಣೆಯ ಹಿಂದೆ ಏನೆಲ್ಲ ನಡೆಯುತ್ತಿದೆ ಎಂಬ ಇಂಚಿಂಚೂ ಮಾಹಿತಿ ನನ್ನ ಗಮನಕ್ಕೆ ಬರುತ್ತದೆ. ಅರ್ಹ ಫಲಾನುಭವಿಗಳಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಜನಪ್ರತಿನಿಧಿಗಳು, ಮುಖಂಡರು ಸಹಕರಿಸಬೇಕು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಸೋಮವಾರ ಪುರಸಭಾ ಸಭಾಭವನದಲ್ಲಿ ನಡೆದ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾನು ಮನವಿ ಮಾಡಿದ್ದರೂ ಸಹಕರಿಸದೇ ಭ್ರಷ್ಟಾಚಾರಕ್ಕೆ ಕೈಯೊಡ್ಡಿದ್ದರೆ ಅವರನ್ನು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು. ಸಾರ್ವಜನಿಕ ಜೀವನದಲ್ಲಿ ಸಹಾಯ ಮಾಡುವ ಆಪೇಕ್ಷೆ ಹೊಂದಿದವರು ಏನನ್ನೂ ನಿರೀಕ್ಷಿಸಲೇಬಾರದು ಎಂದರು.

ದುಡ್ಡು ನೀಡಬೇಡಿ: ಹಳಿಯಾಳ ಪಟ್ಟಣವಾಗಲಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಆಶ್ರಯ ಮನೆಗಳನ್ನು ನೀಡಿದಷ್ಟು ರಾಜ್ಯದಲ್ಲಿ ಎಲ್ಲಿಯೂ ಮನೆಗಳನ್ನು ನೀಡಿಲ್ಲ. ದೇಶಪಾಂಡೆ ಆಶ್ರಯ ನಗರ, ಚವ್ಹಾಣ, ಚರ್ಚ್, ಹೊಸೂರು ಗಲ್ಲಿ ಸೇರಿದಂತೆ ಜಿ- ಪ್ಲಸ್- 2 ಮೊದಲಾದ ಬಡಾವಣೆಗಳು ವಸತಿರಹಿತರಿಗಾಗಿ ನಿರ್ಮಾಣವಾಗಿವೆ ಎಂದರು.

ನನ್ನ ಕ್ಷೇತ್ರದಲ್ಲಿ ವಸತಿರಹಿತರು ಇರಬಾರದೆಂಬುದು ನನ್ನ ಇಚ್ಛೆಯಾಗಿದೆ. ಹೀಗಿರುವಾಗ ಈ ಯೋಜನೆ ದುರುಪಯೋಗವಾಗುವುದನ್ನು ಸಹಿಸುವುದಿಲ್ಲ ಎಂದರು.

ಅತಿ ಬಡವರಿಗೆ, ಸೂರು ರಹಿತರಿಗೆ ಆಶ್ರಯವನ್ನು ಕಲ್ಪಿಸುವ ದಿಸೆಯಿಂದ ಜಮೀನು ಮಂಜೂರು ಮಾಡಿಸಿಕೊಂಡಿದ್ದು, ನಾನೇ ಖುದ್ದು ಫಲಾನುಭವಿಗಳ ಆಯ್ಕೆಯನ್ನು ನಡೆಸಲಿದ್ದೇನೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ನಿಮಗೆ ಸಲಹೆ ಸೂಚನೆಗಳನ್ನು ನೀಡಬಹುದು. ಯಾವುದೇ ಕಾರಣಕ್ಕೂ ಆಶ್ರಯ ಯೋಜನೆಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸಿದವರು ಯಾರಿಗೂ ದುಡ್ಡು ನೀಡಬಾರದು. ದುಡ್ಡು ನೀಡಿದ್ದು ನನ್ನ ಗಮನಕ್ಕೆ ಬಂದಲ್ಲಿ ಅಂಥವರ ಅರ್ಜಿಯನ್ನು ರದ್ದು ಪಡಿಸಲಾಗುವುದು. ಒಂದು ವೇಳೆ ಯಾರಾದರೂ ದುಡ್ಡು ಕೇಳಿದರೆ ಅದನ್ನು ಸಹ ನನ್ನ ಗಮನಕ್ಕೆ ತನ್ನಿ ಎಂದರು.ಜಿ- ಪ್ಲಸ್ 2 ವಸತಿ ಮನೆ ವಿತರಣೆ: ಜಿ- ಪ್ಲಸ್-2 ಯೋಜನೆಯಡಿಯಲ್ಲಿ ನಿರ್ಮಿಸಿದ 240 ಮನೆಗಳಲ್ಲಿ ಬಾಕಿ ಉಳಿದ 30 ಮನೆಗಳಿಗೆ ಹಣ ಸಂದಾಯ ಮಾಡಿದ ಫಲಾನುಭವಿಗಳಿಗೆ ಶಾಲಾ ಮಕ್ಕಳಿಂದ ಚೀಟಿ ಎತ್ತುವ ಮೂಲಕ ಮನೆಗಳನ್ನು ವಿತರಿಸಲಾಯಿತು. ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ತಹಸೀಲ್ದಾರ್‌ ಪ್ರವೀಣ ಹುಚ್ಚಣ್ಣನವರ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಆಶ್ರಯ ಸಮಿತಿಯ ಸದಸ್ಯ ಉಮೇಶ ಬೊಳಶೆಟ್ಟಿ, ಅಣ್ಣಪ್ಪ, ಇಜಾಜ್‌ ಮುಗದ, ಬಾಳೆಕುಂದ್ರಿ ಇದ್ದರು.

Share this article