ಕೊಪ್ಪಳ: ಡಾ. ಬಿ.ಆರ್. ಅಂಬೇಡ್ಕರ್ ಶೋಷಿತರ ಪರ ಧ್ವನಿ ಎತ್ತಿ,ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟವರು ಎಂದು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು.
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕ ವಿಠೋಬ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಎಲ್ಲರೂ ಸ್ವಯಂ ಪ್ರೇರಣೆಯಿಂದ ಆಚರಣೆ ಮಾಡಬೇಕು. ಅವರು ದೇಶದ ಎಲ್ಲ ವರ್ಗಗಳಿಗೆ ಮೀಸಲಾತಿ ಕೊಟ್ಟಿದ್ದಾರೆ.ಎಲ್ಲ ಜಾತಿಯ ಜನರಿಗೆ ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ. ಅಂಬೇಡ್ಕರ್ ವಿಚಾರ ಎಲ್ಲರೂ ಅರ್ಥ ಮಾಡಿಕೊಂಡರೆ ಅರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟಿದ ದಿನ ದಲಿತರ ಮತ್ತು ಹಿಂದುಳಿದ ವರ್ಗಗಳ ಚರಿತ್ರೆಯಲ್ಲಿ ಐತಿಹಾಸಿಕ ದಿನ. ಅವರ ವಿಚಾರ ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟರು. ಎಲ್ಲ ಶೋಷಿತರು ಶಿಕ್ಷಣ ಪಡೆಯಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕಿ ಡಾ.ಹುಲಿಗೆಮ್ಮ, ಡಾ.ಮಲ್ಲಿಕಾರ್ಜುನ, ಸುಮಯ್ಯ, ಹನುಮಪ್ಪ, ಸಂಗಪ್ಪ ಬ್ಯಾಳಿ, ವೆಂಕಟೇಶ್ ಹಾಗೂ ಬೊಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.