ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿದ ಸಚಿವ

KannadaprabhaNewsNetwork |  
Published : Jul 28, 2024, 02:07 AM IST
10 | Kannada Prabha

ಸಾರಾಂಶ

ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜಲದರ್ಶನಿ ಅತಿಥಿಗೃಹದಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮೈಸೂರು ಹಾಗೂ ಚಾಮರಾಜನಗರ ಭಾಗದ ಕಬ್ಬು ಬೆಳೆಗಾರರೊಂದಿಗೆ ಶನಿವಾರ ಸಭೆ ನಡೆಸಿ ಅವರ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಸಚಿವರು, ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದರಂತೆ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಭೆಯಲ್ಲಿ ತಿಳಿಸಿರುವ ಬೇಡಿಕೆಗಳಿಗೆ ಸರ್ಕಾರವು ಪ್ರಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. ಕೆ.ಆರ್. ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತು ಮಾತನಾಡಿದ ಸಚಿವರು, ಸರ್ಕಾರ ಹಾಗೂ ಸಂಸ್ಥೆ ನಡುವ ಒಡಂಬಡಿಕೆಯಾಗಿರುವುದು ಕಾರ್ಖಾನೆ ಪ್ರಾರಂಭಿಸಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮಾಡಿ ಕೊಡಲಾಗುವುದು. ಕಾರ್ಖಾನೆ ಪ್ರಾರಂಭಿಸದ ಬಗ್ಗೆ ಸಂಬಂಧಿಸಿದವರೊಟ್ಟಿಗೆ ಚರ್ಚಿಸಲಾಗುವುದು ಎಂದರು.ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲಾ ರೈತರ ಜಮೀನಿಗೆ ನೀರು ತಲುಪಿಸಲು ನೀರಾವರಿ ಯೋಜನೆ ರೂಪಿಸಲಾಗಿದೆ. ಈ ನಡುವೆ ನಾಲೆಗಳಿಂದ ಮೋಟಾರ್ ಮೂಲಕ ನೀರು ಪಡೆಯುವವರ ಮೇಲೆ ಕ್ರಮ ಜರುಗಿಸಲಾಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಇದರ ಮಾರ್ಪಾಡಿಗೆ ರೈತರು ನೀಡುವ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ ಎಂದು ಅವರು ಹೇಳಿದರು.ಬ್ಯಾಂಕುಗಳಲ್ಲಿ ರೈತರಿಗೆ ಅಸಹಕಾರ ನೀಡುತ್ತಿದ್ದಾರೆ ಎಂಬ ರೈತರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಬ್ಯಾಂಕ್ ಅಧಿಕಾರಿಗಳನ್ನು ಸಭೆ ಕರೆದು ಚರ್ಚಿಸಿ ರೈತರನ್ನು ಶೋಷಣೆ ಮಾಡದಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. ರೈತರು ತಾವು ಬೆಳೆದ ಬೆಳೆ ಸಾಗಿಸಲು ಅನುಕೂಲವಾಗುವ ನಮ್ಮ ಹೊಲ, ನಮ್ಮ ರಸ್ತೆಯನ್ನು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಜನರು ಕೂಡ ಪ್ರಜಾಪ್ರಭುತ್ವದ ಪ್ರಮುಖ ವೇದಿಕೆಯಾದ ಗ್ರಾಮಸಭೆಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹಾಗೂ ರೈತ ಮುಖಂಡರು ಇದ್ದರು.----ಬಾಕ್ಸ್...ರೈತರಿಂದ ಮೊದಲು ಸಭೆ ನಂತರ ಪ್ರತಿಭಟನೆಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ನಗರದ ಗನ್ ಹೌಸ್ ವೃತ್ತದ ಬಳಿಯ ವಿಶ್ವಮಾನವ ಉದ್ಯಾನವನದಲ್ಲಿ ಸಭೆ ನಡೆಸಿದ ರೈತರು, ನಂತರ ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಆವರಣಕ್ಕೆ ಆಗಮಿಸಿ ಕೆಲಕಾಲ ಪ್ರತಿಭಟಿಸಿದರು.ಬಳಿಕ ಸಚಿವರೊಂದಿಗೆ ಜಲದರ್ಶಿನಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಅವರು ಕಬ್ಬು ಬೆಳೆಗಾರರು ಹಾಗೂ ರೈತರ ವಿವಿಧ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.ಸಂಘದ ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಪದಾಧಿಕಾರಿಗಳಾದ ತಿಮ್ಮಪ್ಪ, ಹರ್ಷ, ಸ್ವಾಮಿರಾಜ್, ನಾಗರಾಜ್, ಹಾಡ್ಯ ರವಿ, ಚಿಕ್ಕಸ್ವಾಮಿ, ರೇವಣ್ಣ, ಮಹೇಂದ್ರ, ಪ್ರವೀಣ್, ಮಹದೇವಸ್ವಾಮಿ, ಕುಮಾರ್, ಜಯಸ್ವಾಮಿ, ದೇವೇಂದ್ರಪ್ಪ, ಶಿವರುದ್ರಪ್ಪ, ಮಾದಪ್ಪ, ಗಣೇಶ್, ಸೋಮಣ್ಣ, ಸಿದ್ದಪ್ಪ, ಶಿವಣ್ಣ, ಸ್ವಾಮಿ, ಕೃಷ್ಣಪ್ಪ, ಮಹೇಶ್, ಸಿದ್ದಲಿಂಗಪ್ಪ, ಶಂಕರ್, ಸುರೇಶ್ ಮೊದಲಾದವರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌