ಹುಬ್ಬಳ್ಳಿ:
ಡಾ. ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದು ಹುಬ್ಬಳ್ಳಿ ಎರಡೆತ್ತಿನಮಠದ ಸಿದ್ಧಲಿಂಗ ಶ್ರೀ, ಹುಕ್ಕೇರಿಮಠದ ಸದಾಶಿವ ಶ್ರೀ, ರುದ್ರಾಕ್ಷಿಮಠದ ಬಸವಲಿಂಗ ಶ್ರೀ, ಅಕ್ಕಿಆಲೂರು ವಿರಕ್ತಮಠದ ಶಿವಬಸವ ಶ್ರೀ, ರಾಯನಾಳ ವಿರಕ್ತಮಠದ ಶಿವಬಸವ ಶ್ರೀ, ಗದ್ದಗಿಮಠದ ಚರಲಿಂಗ ಶ್ರೀಗಳು ಸಮ್ಮುಖ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿಪ ಮಾಜಿ ಸಭಾಪತಿ ವೀರಣ್ಣ ಚರಂತಿಮಠ, ಗುರುಸಿದ್ದೇಶ್ವರ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ, ಪಾಲಿಕೆ ಸದಸ್ಯೆ ಸುನಿತಾ ಬುರಬುರೆ ಪಾಲ್ಗೊಳ್ಳುವರು.
ಪ್ರಶಸ್ತಿ ಪ್ರದಾನ:22 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ತೋರಿದವರಿಗೆ ನೀಡಲಾಗುತ್ತಿರುವ "ಡಾ. ಮೂಜಗಂ ಸಾಹಿತ್ಯ ಪ್ರಶಸ್ತಿ "ಯನ್ನು ಈ ಬಾರಿ ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀಗಳಿಗೆ ಪ್ರದಾನ ಮಾಡಲಾಗುತ್ತಿದೆ. ಶ್ರೀಗಳು ನಗರದಲ್ಲಿ 12 ಜ್ಯೋತಿರ್ಲಿಂಗಗಳ ಮರುಪ್ರತಿಷ್ಠಾಪನೆ, ಶ್ರೀಮನ್ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿ ಮಹಾ ಕೃತಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದ, ಯೋಗ ಅಧ್ಯಾತ್ಮ ಶಿಕ್ಷಣವನ್ನು ಪಾಶ್ಚಿಮಾತ್ಯರಿಗೂ ತಿಳಿಸಿದ ಮಹತ್ತಕಾರ್ಯ, ಖುಷಿಕೇಶ ಮೊದಲಾದಡೆ ಧಾರ್ಮಿಕ ಶಿಬಿರ ಆಯೋಜಿಸಿ, ಧರ್ಮ ಸಂಸ್ಕೃತಿಗಳ ಉನ್ನತೀಕರಣ, ಧರ್ಮ ಜಾಗೃತಿಗಾಗಿ ಪಾದಯಾತ್ರೆ ಮತ್ತು ಧಾರ್ಮಿಕ, ಸಾಂಸ್ಕೃತಿಕ ಶೈಕ್ಷಣಿಕ, ಆಧ್ಯಾತ್ಮಿಕ, ವಚನ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ₹25 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.