ಅಪಘಾತಗಳ ಹೆಚ್ಚಳಕ್ಕೆ ಚಾಲಕರ ನಿರ್ಲಕ್ಷ್ಯ ಕಾರಣ

KannadaprabhaNewsNetwork |  
Published : Apr 09, 2026, 01:45 AM IST
8ಎಚ್ಎಸ್ಎನ್7 : ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಲಯನ್ಸ್ ಸಂಸ್ಥೆಯ ವತಿಯಿಂದ “ರಸ್ತೆ ಸುರಕ್ಷತಾ ಸಪ್ತಾಹ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ, ನಿಯಮ ಉಲ್ಲಂಘನೆ ಹಾಗೂ ಬೇಜವಾಬ್ದಾರಿತನದಿಂದ ಅಪಘಾತಗಳು ಹೆಚ್ಚುತ್ತಿವೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಕಾನೂನುಬಾಹಿರವಾಗಿದ್ದು, ಕೈಯಲ್ಲಿ ಹಿಡಿದುಕೊಂಡಿರುವುದೇ ಶಿಕ್ಷಾರ್ಹ ಅಪರಾಧ. ರಸ್ತೆ ಸುರಕ್ಷತೆಗೆ ಶಿಸ್ತು, ತಾಳ್ಮೆ ಮತ್ತು ನಿಯಮ ಪಾಲನೆ ಅತ್ಯಗತ್ಯ. ರಸ್ತೆ ಸೂಚನಾ ಫಲಕಗಳನ್ನು ಗಮನಿಸಿ ಚಾಲನೆ ಮಾಡಬೇಕು. ಏಕಾಗ್ರತೆಯ ಕೊರತೆ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದಕ್ಕೆ ಚಾಲಕರ ನಿರ್ಲಕ್ಷ್ಯ ಮತ್ತು ಏಕಾಗ್ರತೆಯ ಕೊರತೆಯೇ ಮುಖ್ಯ ಕಾರಣವಾಗಿದೆ ಎಂದು ಮೋಟಾರು ವಾಹನ ನಿರೀಕ್ಷಕರಾದ ಆಲಿಯುದ್ದೀನ್ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಲಯನ್ಸ್ ಸಂಸ್ಥೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಅಪಘಾತಗಳಿಗೆ ರಸ್ತೆ, ವಾಹನ ಮತ್ತು ಚಾಲಕ ಎಂಬ ಮೂರು ಅಂಶಗಳು ಕಾರಣವಾಗುತ್ತವೆ. ಆದರೆ ಶೇಕಡಾ 99ರಷ್ಟು ಅಪಘಾತಗಳು ಚಾಲಕರ ತಪ್ಪಿನಿಂದಲೇ ಸಂಭವಿಸುತ್ತವೆ. ರಸ್ತೆ ದೋಷ ಅಥವಾ ವಾಹನದ ತಾಂತ್ರಿಕ ಸಮಸ್ಯೆಗಳು ಅತಿ ಕಡಿಮೆ ಪ್ರಮಾಣದಲ್ಲಿ ಕಾರಣವಾಗುತ್ತವೆ ಎಂದರು. ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ, ನಿಯಮ ಉಲ್ಲಂಘನೆ ಹಾಗೂ ಬೇಜವಾಬ್ದಾರಿತನದಿಂದ ಅಪಘಾತಗಳು ಹೆಚ್ಚುತ್ತಿವೆ. ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು ಕಾನೂನುಬಾಹಿರವಾಗಿದ್ದು, ಕೈಯಲ್ಲಿ ಹಿಡಿದುಕೊಂಡಿರುವುದೇ ಶಿಕ್ಷಾರ್ಹ ಅಪರಾಧ. ರಸ್ತೆ ಸುರಕ್ಷತೆಗೆ ಶಿಸ್ತು, ತಾಳ್ಮೆ ಮತ್ತು ನಿಯಮ ಪಾಲನೆ ಅತ್ಯಗತ್ಯ. ರಸ್ತೆ ಸೂಚನಾ ಫಲಕಗಳನ್ನು ಗಮನಿಸಿ ಚಾಲನೆ ಮಾಡಬೇಕು. ಏಕಾಗ್ರತೆಯ ಕೊರತೆ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷೆ ತಾರಾಮಣಿ ಸುರೇಶ್ ಅವರು ಮಾತನಾಡಿ ರಸ್ತೆ ಸುರಕ್ಷತೆಯನ್ನು ಸಮಾಜದ ಮಹತ್ವದ “ಸಾಮಾಜಿಕ ಆರೋಗ್ಯ” “ನನ್ನ ವಾಹನ, ನನ್ನ ಇಷ್ಟ” ಎಂಬ ಮನೋಭಾವವನ್ನು ಬಿಟ್ಟು, ನಮ್ಮ ತಪ್ಪಿನಿಂದ ಇತರರಿಗೆ ಅಪಾಯವಾಗಬಾರದು ಎಂಬ ಜವಾಬ್ದಾರಿ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು. ಪೋಷಕರ ಜವಾಬ್ದಾರಿಯನ್ನು ಉಲ್ಲೇಖಿಸಿದ ಅವರು, 18 ವರ್ಷ ಪೂರ್ಣಗೊಳ್ಳುವ ಮೊದಲು ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು. ಚಾಲನಾ ಪರವಾನಗಿ ಪಡೆದ ನಂತರ ಮಾತ್ರ ವಾಹನ ಬಳಸಲು ಅವಕಾಶ ನೀಡಬೇಕು ಹಾಗೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಚಂದ್ರಮೌಳಿ ಮಾತನಾಡಿ , ರಸ್ತೆ ಸುರಕ್ಷತೆ ಕುರಿತು ಇನ್ನಷ್ಟು ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ನಿಯಮ ಪಾಲನೆ ಮಾಡದಿರುವುದು ಆತಂಕಕಾರಿ. “ಡ್ರಿಂಕ್ ಅಂಡ್ ಡ್ರೈವ್” ಪ್ರಕರಣಗಳು ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಪೊಲೀಸ್ ಇಲ್ಲದಿದ್ದರೂ ನಿಯಮ ಪಾಲನೆ ಮಾಡಬೇಕು ಎಂಬ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಸದಸ್ಯರಾದ ಪ್ರಭಾಕರ್, ಹೇಮಂತ್, ಕೆ. ಎಲ್. ಸುರೇಶ್, ಸಂತೋಷ್, ಆದರ್ಶ್‌ ಅಬ್ದುಲ್ ಲತೀಫ್, ಪ್ರಶಾಂತ್, ಗೆಂಡೆಹಳ್ಳಿ ಚೇತನ್, ಮೀಸೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದಿ ಕುರಿತು ರಾಜ್ಯಪಾಲರ ಪತ್ರಕ್ಕೆ ಕರವೇ ಕಾವು: ಹೋರಾಟದ ಬಿಸಿ
ಗೊಲ್ಲರಹಳ್ಳಿ ಕಾಳಮ್ಮದೇವಿ ಜಾತ್ರಾ ಮಹೋತ್ಸವ ಸಂಪನ್ನ..!