ಜಿಮ್‌ ಟ್ರೈನರ್‌ಗಳ ಮತಾಂತರ ಕೃತ್ಯ ತಡೆಯಿರಿ: ಮಂಜುನಾಥ್

KannadaprabhaNewsNetwork |  
Published : Apr 09, 2026, 01:45 AM IST
ಫಿಟ್ನೆಸ್ ಜಿಮ್ನಲ್ಲಿ ನಡೆದ ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಲಕ್ಷಾಂತರ ಹಣ ಹಾಗೂ ಚಿನ್ನ ದೋಚುವುದು ಮತ್ತು ಮೋಸದಿಂದ ಮತಾಂತರಿಸುವ ಘಟನೆ ಸಾಮಾನ್ಯವಾಗುತ್ತಿದ್ದು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡ ಸಂಘಟಿತ ಸಂಚು ತಡೆಗಟ್ಟುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ರಾ.ಸ್ವಂ.ಸೇ ಸಂಘದ ಹಿರಿಯ ಸ್ವಯಂ ಸೇವಕ ಬಿ.ವಿ.ಮಂಜುನಾಥ್ ಬೇಗೂರು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಫಿಟ್ನೆಸ್ ಕೇಂದ್ರಗಳ ಹೆಸರಿನಲ್ಲಿ ಮತಾಂತರದ ಕೇಂದ್ರಗಳಾಗಿರುವ ಜಿಮ್‌ ಸೆಂಟರ್‌ಗಳಲ್ಲಿನ ಟ್ರೈನರ್‌ಗಳ ಅಸಭ್ಯ ವರ್ತನೆ, ವ್ಯಾಯಾಮದ ಸಂದರ್ಭದಲ್ಲಿ ಲೈಂಗಿಕ ಕಿರುಕುಳ, ನಿರಂತರ ಅತ್ಯಾಚಾರ, ಲಕ್ಷಾಂತರ ಹಣ ಹಾಗೂ ಚಿನ್ನ ದೋಚುವುದು ಮತ್ತು ಮೋಸದಿಂದ ಮತಾಂತರಿಸುವ ಘಟನೆ ಸಾಮಾನ್ಯವಾಗುತ್ತಿದ್ದು ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡ ಸಂಘಟಿತ ಸಂಚು ತಡೆಗಟ್ಟುವಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದು ರಾ.ಸ್ವಂ.ಸೇ ಸಂಘದ ಹಿರಿಯ ಸ್ವಯಂ ಸೇವಕ ಬಿ.ವಿ.ಮಂಜುನಾಥ್ ಬೇಗೂರು ಆಗ್ರಹಿಸಿದರು.

ಹುಬ್ಬಳ್ಳಿಯ ಫಿಟ್ನೆಸ್ ಜಿಮ್‌ನಲ್ಲಿ ನಡೆದ ಲವ್ ಜಿಹಾದ್ ಮತ್ತು ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹುಬ್ಬಳ್ಳಿಯ ಫಿಟ್ನೆಸ್‌ ಜಿಮ್‌ನಲ್ಲಿ ಮಾಲಿಕ ಸಮೀರ್ ಮುಲ್ಲಾ ಹಾಗೂ ಸಹೋದರಿ ತೈಸೀಮ್ ಮುಲ್ಲಾ ಪ್ರಮುಖ ಅಪರಾಧಿಗಳಾಗಿದ್ದು, ಹಿಂದೂ ಯುವತಿಯರ ಜತೆ ಸ್ನೇಹ ಬೆಳೆಸಿ ಮದ್ಯಪಾನ, ತಂಪು ಪಾನೀಯಗಳಲ್ಲಿ ಮದ್ದು ಬೆರೆಸಿ ಅತ್ಯಾಚಾರ ನಡೆಸಿ ನಗ್ನ ಫೋಟೋ,ವೀಡಿಯೊ ತೆಗೆದು ಬ್ಲಾಕ್ಮೇಲ್ ಮೂಲಕ ಇಸ್ಲಾಂಗೆ ಮತಾಂತರಿಸುವ ಷಡ್ಯಂತ್ರದಲ್ಲಿ ತೈಸೀಮ್ ಮುಲ್ಲಾ ಪ್ರಮುಖ ಸಂಚಾಲಕಿ ರೀತಿ ಕಾರ್ಯನಿರ್ವಹಿಸಿ ಹಿಂದೂ ಯುವತಿಯರನ್ನು ಸಹೋದರನಿಗೆ ಪರಿಚಯಿಸಿ ಮೋಸದಿಂದ ಪ್ರಭಾವಿಸಿ ಹೋಟೆಲ್ ಪಾರ್ಟಿಗಳಿಗೆ ಸೆಳೆದು ಜಾಲದಲ್ಲಿ ಸಿಲುಕಿಸುತ್ತಿದ್ದಾಳೆ ಎಂದು ಆರೋಪಿಸಿದ ಅವರು, ಪೊಲೀಸರ ತನಿಖೆಯಲ್ಲಿ ಸಮೀರ್ ಮುಲ್ಲಾನ ಮೊಬೈಲ್‌ನಲ್ಲಿ ಹಲವು ಹಿಂದೂ ಯುವತಿಯರ ಅರೆನಗ್ನ ಚಿತ್ರಗಳು ಪತ್ತೆಯಾಗಿದ್ದು ಸದ್ಯ ಹಲವು ಸಂತ್ರಸ್ತೆಯರು ಮುಂದೆ ಬರುತ್ತಿದ್ದಾರೆ ಎಂದು ತಿಳಿಸಿದರು.

ಇದೇ ಜಿಮ್‌ನಲ್ಲಿ ಮತ್ತೋರ್ವ ಮುಸ್ಲಿಂ ಯುವಕ ಸಹ ಇದೇ ವಿಧಾನದಲ್ಲಿ ಮತ್ತೋರ್ವ ಹಿಂದೂ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ಗಂಭೀರ ವಿಷಯವಾಗಿದ್ದು, ಸಮೀರ್ ಮುಲ್ಲ ನಗ್ನ ವಿಡಿಯೋ ಬಳಸಿ ಹಣ ವಸೂಲಿ ಮೂಲಕ ಹಿಂದೂ ಮಹಿಳೆಯರನ್ನು ಎಟಿಎಂ ರೀತಿ ಬಳಸಿಕೊಂಡು ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಸಂತ್ರಸ್ತೆ ತಿಳಿಸಿದ್ದಾಳೆ. ಅತ್ಯಂತ ಗಂಭೀರವಾಗಿರುವ ಇಂತಹ ಘಟನೆ ಹಲವೆಡೆ ನಡೆದಿದ್ದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜಿಮ್ ಜಾಲವನ್ನು ಪೊಲೀಸರು ಭೇದಿಸಿ ಹಲವು ಜಿಮ್ ಸೆಂಟರ್ ಸೀಲ್ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಯದ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ಪ್ರದೇಶದಲ್ಲಿ ಪಿಎಫ್ಐಗೆ ಸಂಬಂಧಿಸಿದ ಶಾಹಿನ್ ಗ್ಯಾಂಗ್ ಎಂಬ ಜಾಲವು ಇಂತಹ ಕೃತ್ಯದಲ್ಲಿ ತೊಡಗಿಕೊಂಡಿದ್ದ ಪ್ರಕರಣಗಳು ಬಹಿರಂಗವಾಗಿರುವ ಬಗ್ಗೆ ಶಂಕೆ ದಟ್ಟವಾಗಿದೆ ಎಂದು ತಿಳಿಸಿದರು.

ಫಿಟ್ನೆಸ್ ಕೇಂದ್ರಗಳ ಹೆಸರಿನಲ್ಲಿ ಮತಾಂತರದ ಕೇಂದ್ರಗಳಾಗಿರುವ ಜಿಮ್ ಕೇಂದ್ರದಲ್ಲಿನ ಕುಕೃತ್ಯ ತಡೆಗಟ್ಟುವಲ್ಲಿ ಸರ್ಕಾರ ನಿರ್ಲಕ್ಷಿಸದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ ತಪ್ಪಿದಲ್ಲಿ ಬೀದಿ ಬೀದಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸಂಚಾಲಕ ಪರಶುರಾಮ ಮಾತನಾಡಿ, ಸಮೀರ್ ಮುಲ್ಲಾ, ತೈಸೀಮ್ ಮುಲ್ಲಾ ಮತ್ತು ಸಂಬಂಧಿತ ಜಿಮ್ ಜಾಲದ ಕುರಿತು ಸಮಗ್ರ ತನಿಖೆ ನಡೆಸಿ, ಎಲ್ಲಾ ಮೊಬೈಲ್,ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿ,ಇತರೆ ಸಂತ್ರಸ್ಥರ ಹಾಗೂ ಶಾಹಿನ್ ಗ್ಯಾಂಗ್ ಸಂಪರ್ಕಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಮಹಿಳೆಯರ ಸುರಕ್ಷತೆಗೆ ಅತ್ಯಂತ ಅಪಾಯಕಾರಿಯಾಗಿರುವ ಘಟನೆಯ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಂತರದಲ್ಲಿ ರಾಜ್ಯದ ಗೃಹ ಸಚಿವರಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು. ವಿವಿಧ ಹಿಂದೂ ಪರ ಸಂಘಟನೆಗಳ ಮುಖಂಡರಾದ ಶರತ್, ಈರೇಶ್, ಆನಂದ್, ಅರ್ಜುನ್ ರಾವ್, ಗುರುಪ್ರಸಾದ್ ಹಿರೇಮಠ್, ರವಿ, ಬೆಂಕಿ ಸಿದ್ದಪ್ಪ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದಿ ಕುರಿತು ರಾಜ್ಯಪಾಲರ ಪತ್ರಕ್ಕೆ ಕರವೇ ಕಾವು: ಹೋರಾಟದ ಬಿಸಿ
ಗೊಲ್ಲರಹಳ್ಳಿ ಕಾಳಮ್ಮದೇವಿ ಜಾತ್ರಾ ಮಹೋತ್ಸವ ಸಂಪನ್ನ..!