ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿ ಆರ್ಥಿಕ ಪ್ರಗತಿ

KannadaprabhaNewsNetwork |  
Published : Jul 21, 2025, 12:00 AM IST
20ುಲು2 | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡಿದ ಸಂದರ್ಭದಲ್ಲಿ ಅಲ್ಲಿನ ಸರ್ಕಾರಗಳು ಮೋದಿ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ

ಗಂಗಾವತಿ: ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಆಡಳಿತಾವಧಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸಿ, ಭಾರತವನ್ನು ಜಗತ್ತು ಮೆಚ್ಚುವಂತೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅವರು ತಾಲೂಕಿನ ಮರಳಿ ಗ್ರಾಮದ ರಿಚ್ ಕೌಂಟಿಯ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಬಳ್ಳಾರಿ ವಿಭಾಗ ಮಟ್ಟದ ಬಿಜೆಪಿ ಸಂಘಟನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಮಾಡಿದ ಸಂದರ್ಭದಲ್ಲಿ ಅಲ್ಲಿನ ಸರ್ಕಾರಗಳು ಮೋದಿ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ. ಅದರಂತೆ ಭಾರತವನ್ನು ನೋಡುವಂತೆ ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ ಎಂದ ಅವರು, ಮೈಸೂರಲ್ಲಿ ಜರುಗಿದ ಸಾಧನಾ ಸಮಾವೇಶದಲ್ಲಿ 10 ಸಾವಿರ ಆಸನದಲ್ಲಿ 8 ಸಾವಿರ ಆಸನಗಳು ಖಾಲಿ ಇದ್ದವು. ಸಿದ್ದರಾಮಯ್ಯ ತಮ್ಮ ಭಾವಚಿತ್ರ ಜನರಿಗೆ ಕೊಟ್ಟು ಜೈಕಾರ ಹಾಕಿಸಿಕೊಂಡಿರುವುದು ದೊಡ್ಡ ದುರಂತ. ಸಿದ್ದರಾಮಯ್ಯ ರೈತರ ಪರ ಕೆಲಸ ಮಾಡಿದ್ದರೆ ರೈತರೆ ಜೈಕಾರ ಹಾಕುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಇದ್ದ ಸಂದರ್ಭದಲ್ಲಿ ಅವರು ರೈತರ ಪರ ಕೆಲಸ ಮಾಡಿದ್ದಾರೆ. ಇದರಿಂದ ಅವರನ್ನು ರೈತ ನಾಯಕರೆಂದು ಕರೆಯುತ್ತಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕುರಿತು ಸವಾಲು ಹಾಕುತ್ತಿದ್ದಾರೆ. ಮೊದಲು ತಮ್ಮ ಶಾಸಕರ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ರೈತರು ಹೊಲ ಗದ್ದೆಗಳಿಗೆ ರಸ್ತೆ ಕೇಳಿದರೆ ಅವರಿಗೆ ಹೆದರಿಸುತ್ತಿದ್ದಾರೆ, ಅವರು ಎಂತಹ ಸಲಹೆಗಾರರಾಗಿದ್ದಾರೆ ಎಂದರು.

ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ ಮುಖ್ಯಮಂತ್ರಿಗಳಿಗೆ ಲಾಟರಿ ಸಿಎಂ ಎಂದು ಹೇಳಿದ್ದಾರೆ. ಇದಕ್ಕಿಂತ ವಿರೋಧ ಪಕ್ಷದವರು ಏನು ಹೇಳುವುದು ಬೇಕಾಗಿಲ್ಲ ಎಂದರು.

ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿ ಚುನಾವಣೆಗೆ ಖರ್ಚು ಮಾಡಿದ್ದಾರೆ. ಅಲ್ಲದೇ ಜೈಲು ಸೇರಿದ್ದಾರೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಆರೋಪಿ ಸ್ಥಾನದಲ್ಲಿದ್ದರು ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ಮೋದಿ ಕಾರ್ಯಕ್ರಮದ ಬಗ್ಗೆ ಕಟ್ಟಕಡೆಯ ಜನರಿಗೆ ತಿಳಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಪಡೆದು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಟ್ಟ ಸರ್ಕಾರ: ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಕೆಟ್ಟದ್ದಾಗಿದೆ. ಐದು ಗ್ಯಾರಂಟಿ ಜಾರಿಗೆ ತಂದ ನಂತರ ಭ್ರಷ್ಟಾಚಾರ ಹೆಚ್ಚಿದೆ. ಕೊಪ್ಪಳ ಜಿಲ್ಲೆಯಲ್ಲಿ ಡ್ರಗ್ಸ್‌, ಕ್ಲಬ್‌ಗಳ ಹಾವಳಿ ಅತಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರು ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ ಎಂದರು.

ನಾನು ಮತ್ತು ಶ್ರೀರಾಮುಲು ಒಂದಾಗಿದ್ದೇವೆ. ಆದರೆ ಮಧ್ಯಸ್ಥಿಕೆ ವಹಿಸಲು ಬರುವವರು ಮೂರ್ಖರು. ಯಡಿಯೂರಪ್ಪ ಅವರ ಶಕ್ತಿ ವಿಜಯೇಂದ್ರ ಅವರಿಗೆ ಇದೆ. ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜು ಮಾತನಾಡಿದರು.

ವೇದಿಕೆ ಮೇಲೆ ಮಾಜಿ ಸಚಿವ ಬಿ. ಶ್ರೀರಾಮುಲು, ಸುಧಾಕರ ರೆಡ್ಡಿ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಶಿವರಾಮಗೌಡ, ದೇವೇಂದ್ರಪ್ಪ ನಾಯಕ, ಶಾಸಕರಾದ ಶಿವರಾಜ ಪಾಟೀಲ್, ಹೇಮಂತ ನಾಯಕ, ಕೃಷ್ಣನಾಯಕ, ಶಶಿಲ ನಮೋಶಿ, ಹೇಮಲತಾ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ಅನಿಲ್ ಬಳ್ಳಾರಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಬಸನಗೌಡ ಬ್ಯಾಗವಾಟ್, ಡಾ. ಬಸವರಾಜ ಕೊಪ್ಪಳ, ಗಂಗಾಧರ ನಾಯಕ, ಎನ್. ಶಂಕ್ರಪ್ಪ, ಸೋಮಶೇಖರ ರೆಡ್ಡಿ, ಕೆ. ದಿವಾಕರ, ಶರಣಪ್ಪ ತಾಳಿಕೇರಿ, ಸಂಜೀವ ರೆಡ್ಡಿ, ಎಂಎಲ್‌ಸಿ ಸತೀಶ, ವಿರೂಪಾಕ್ಷಪ್ಪ ಸಿಂಗನಾಳ ಭಾಗವಹಿಸಿದ್ದರು.

PREV

Latest Stories

ಜಿಲ್ಲೆಯಲ್ಲಿ ಬೇಡಿಕೆಗಿಂತ ಹೆಚ್ಚು ಯೂರಿಯಾ ಪೂರೈಕೆ
ಕನ್ನಿಕಾ ಮಹಲ್‌ನಲ್ಲಿ ನಾಣ್ಯ, ನೋಟುಗಳ ಅಪೂರ್ವ ಪ್ರದರ್ಶನ
ಜಿ.ಎಸ್‌.ಟಿ ವಿರೋಧಿಸಿ ಪ್ರತಿಭಟನೆ