ಶಿಕ್ಷಣವೇ ಭವಿಷ್ಯದ ಭದ್ರ ಬುನಾದಿ: ಪ್ರೊ.ಮಾಯಾ ಸಾರಂಗಪಾಣಿ

KannadaprabhaNewsNetwork | Published : Apr 13, 2025 2:11 AM

ಸಾರಾಂಶ

ಕಾಲೇಜು ಜೀವನ ಮೋಜಿನ ಜೀವನವಲ್ಲ ಇದನ್ನರಿತು, ಆಳವಾದ ಅಧ್ಯಯನ, ನಿಖರ ಗುರಿಯತ್ತ ಮುನ್ನಡೆಯಿರಿ, ಶಿಕ್ಷಣವೇ ಭವಿಷ್ಯದ ಬುನಾದಿ ಎಂದರಿತು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಪ್ರಾಂಶುಪಾಲರಾದ ಪ್ರೊ.ಮಾಯಾ ಸಾರಂಗಪಾಣಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್ ಕಾಲೇಜು ಜೀವನ ಮೋಜಿನ ಜೀವನವಲ್ಲ ಇದನ್ನರಿತು, ಆಳವಾದ ಅಧ್ಯಯನ, ನಿಖರ ಗುರಿಯತ್ತ ಮುನ್ನಡೆಯಿರಿ, ಶಿಕ್ಷಣವೇ ಭವಿಷ್ಯದ ಬುನಾದಿ ಎಂದರಿತು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಪ್ರಾಂಶುಪಾಲರಾದ ಪ್ರೊ.ಮಾಯಾ ಸಾರಂಗಪಾಣಿ ಕರೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಪುನಶ್ಚೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣವು ಬದುಕಿನ ಕತ್ತಲೆಯನ್ನು ದೂರವಾಗಿಸಿ ಅರಿವಿನ ಹಣತೆಯನ್ನು ಹಚ್ಚಿ ಬದುಕನ್ನು ಉಜ್ವಲಗೊಳಿಸುತ್ತದೆ ಎನ್ನುವ ಆತ್ಮವಿಶ್ವಾಸವಿರಲಿ. ಬಹುತೇಕ ಸಾಧಕರು ನಿರಂತರ ಅಧ್ಯಯನದಿಂದ ಹೊರಹೊಮ್ಮುತ್ತಾರೆ. ಆದುದರಿಂದ ಕಠಿಣ ಪರಿಶ್ರಮದಿಂದ ಅಧ್ಯಯನಶೀಲರಾಗಿ ಎಂದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಟಿ.ಎನ್. ನರಸಿಂಹಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡದೇ, ಅಧ್ಯಯನದ ಮಾಹಿತಿ ಸಂಗ್ರಹಿಸಲು ಸದ್ಬಳಕೆ ಮಾಡಿಕೊಂಡು ತಂತ್ರಜ್ಞಾನ, ಡಿಜಿಟಲ್ ಕ್ಷೇತ್ರದ ಆವಿಷ್ಕಾರಗಳನ್ನು ಮೊಬೈಲ್ ಮೂಲಕ ಪಡೆಯಬೇಕು. ವಿವಿಧ ಆಪ್, ಜಾಲತಾಣಗಳಲ್ಲಿ ದೊರೆಯುವ ಜ್ಞಾನದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಅಣಕು ಪರೀಕ್ಷೆಗಳನ್ನು ಅಭ್ಯಾಸ ಮಾಡಿ, ಪರೀಕ್ಷೆಯ ಭಯದಿಂದ ಹೊರಬಂದು ಸಾಧಕರಾಗಬೇಕೆಂದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಾಮಾಂಜನಪ್ಪ ಮಾತನಾಡಿ ಸರ್ಕಾರಿ ಕಾಲೇಜುಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸಂವಹನ, ಮೃದುಕೌಶಲ್ಯಗಳನ್ನು ಕಲಿಸಿ ನಾಯಕತ್ವ ಗುಣಗಳನ್ನು ಕಲಿಸುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ಮೆಟ್ಟಿ ನಿಂತು ಸಮಾಜದ ಎಲ್ಲ ವರ್ಗದ ವರಿಗೂ ಸಮಾನ ಶಿಕ್ಷಣ ನೀಡಿ, ಸತ್ಪ್ರಜೆಗಳನ್ನಾಗಿ ರೂಪಿಸುತ್ತಿವೆ. ವಿದ್ಯಾವಂತ ಸಮುದಾಯ ದೇಶದ ಆಸ್ತಿಯಾಗಬೇಕೆಂದರು.ಅಧ್ಯಾಪಕರಾದ ಈಶ್ವರಪ್ಪ, ಡಾ.ರಾಧಾಕೃಷ್ಣ, ಡಾ.ಮಂಜುಳ, ಡಾ.ಶ್ರೀನಿವಾಸ.ಎನ್.ಟಿ., ರವಿಕುಮಾರ್.ಕೆ. ಡಾ.ನಾಗಮ್ಮ ಮಾತನಾಡಿದರು. ಅಧ್ಯಾಪಕರಾದ ಡಾ.ನಿರ್ಮಲ, ಡಾ.ರಾಧಾ, ಡಾ.ಮಮತ, ಡಾ.ಧರಣೇಶ್, ಡಾ.ಮೋಹನ್ ಕುಮಾರ್, ಗಂಗಾಧರ್, ವಿಷ್ಣು, ರೇವಣ್ಣಸಿದ್ದೇಶ್ವರ ಉಪಸ್ಥಿತರಿದ್ದರು.

Share this article