ವಿದ್ಯಾಸಂಸ್ಥೆಗಳು ಸತ್ಪ್ರಜೆಗಳನ್ನು ರೂಪಿಸುವ ದೇಗುಲಗಳು: ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Jan 12, 2026, 01:15 AM IST
11ಕೆಆರ್ ಎಂಎನ್ 1.ಜೆಪಿಜಿರಾಮನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ  ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಲಾ ವಾಹನ ಮತ್ತು ಆಟೋ ಚಾಲಕರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಎಲ್ಲ ವಿಭಾಗದಲ್ಲಿಯೂ ಸಹ ಆಸಕ್ತಿಯನ್ನು ಹೊಂದಿರಬೇಕು, ಸ್ಪರ್ಧಿಸಬೇಕು. ಅದಕ್ಕೆ ಸೂಕ್ತ ವಾತಾವರಣ, ತರಬೇತಿ ಹಾಗೂ ಮಾರ್ಗದರ್ಶನವನ್ನು ಶಾಲೆಯು ಕಲ್ಪಿಸುತ್ತಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಒಂದು ವಿದ್ಯಾಸಂಸ್ಥೆ ನೂರು ದೇಗುಲಗಳಿಗೆ ಸಮಾನ. ದೇವಾಲಯದಲ್ಲಿರುವ ಮೂರ್ತಿ ಪೂಜಿಸಲ್ಪಡುವಂತೆ, ವಿದ್ಯಾಸಂಸ್ಥೆಗಳು ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ ಸಮಾಜದಲ್ಲಿ ಗೌರವಿಸುವಂತೆ ಮಾಡುತ್ತಿವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಸಾಧಾರಣವಾದ ಕಲ್ಲಿಗೆ ಪೂಜೆ ಮಾಡುವುದಿಲ್ಲ. ಆ ಕಲ್ಲಿಗೆ ಉಳಿ ಪೆಟ್ಟು ನೀಡಿ ರೂಪ ಕೊಟ್ಟರೆ ಪೂಜೆ ಮಾಡುತ್ತೇವೆ. ಅದೇ ರೀತಿ ವಿದ್ಯಾಸಂಸ್ಥೆಗಳು ಅಕ್ಷರ ಜ್ಞಾನ ತುಂಬಿ, ಶಿಸ್ತು ಅಳವಡಿಸಿದ ಮಗುವಿಗೆ ಸಮಾಜ ಗೌರವ ಸಲ್ಲಿಸುತ್ತದೆ ಎಂದರು.

ಪೋಷಕರು ಏನೂ ಅರಿಯದ ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ. ಆ ಮಗುವಿಗೆ ಅಕ್ಷರ ಕಲಿಸಿ, ಸಂಸ್ಕಾರ ಹೇಳಿಕೊಟ್ಟು ಸತ್ಪ್ರಜೆಯ ಮೂರ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡುತ್ತವೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಾತ್ರವಲ್ಲದೆ ಪೋಷಕರ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ತಿಳಿಸಿದರು.

ಶಾಲಾ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬ ಇದ್ದಂತೆ. ಪ್ರತಿಭೆಗಳ ಅನಾವರಣಕ್ಕೂ ಉತ್ತಮ ವೇದಿಕೆಯಾಗಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾಗುವ ಪ್ರತಿಭಾನ್ವಿತರಿಗೆ ಗೌರವಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದೇ ರೀತಿ ಮಕ್ಕಳ ಆದಿಯಾಗಿ ಎಲ್ಲ ವಯೋಮಾನದವರ ಪ್ರತಿಭೆ ಅನಾವರಣಕ್ಕೆ ರಾಮೋತ್ಸವ ವೇದಿಕೆ ಕಲ್ಪಿಸುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಇಕ್ಬಾಲ್ ಹುಸೇನ್ ಮನವಿ ಮಾಡಿದರು.

ಪೋಷಕರು ಮಕ್ಕಳಿಂದ ಅಂತರ ಕಾಪಾಡದಿರಿ:

ಹೋಲಿ ಕ್ರೆಸೆಂಟ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಅಲ್ತಾಫ್ ಅಹಮದ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೋಲಿ ಕ್ರೆಸೆಂಟ್ ಶಾಲೆ ತನ್ನದೇ ಆದ ಛಾಪು ಮೂಡಿಸಿದೆ. ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸಲು ಪಣ ತೊಟ್ಟಿದ್ದೇವೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದರು.

ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ವಿಷಯಗಳು ಸಹ ಮುಖ್ಯ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರ ಆಸಕ್ತಿಗೆ ಅನುಸಾರವಾಗಿ ಇಂತಹ ವೇದಿಕೆಯನ್ನು ನೀಡುವ ಮೂಲಕ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವುದು ನಮ್ಮ ಶಾಲೆಯ ಉದ್ದೇಶವಾಗಿದೆ. ಶಾಲೆಯು ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿ ಹೆಜ್ಜೆ ಗುರುತು ದಾಖಲಿಸುವಂತೆ ಮಾಡಿದೆ ಎಂದು ಹೇಳಿದರು.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಮಾತ್ರವಲ್ಲದೆ ಪೋಷಕರ ಜವಾಬ್ದಾರಿಯೂ ಹೆಚ್ಚಿದೆ. ಮಕ್ಕಳೇ ನಮಗೆ ಮತ್ತು ಸಮಾಜಕ್ಕೆ ನಿಜವಾದ ಆಸ್ತಿಯಾಗಿದ್ದು, ಅವರನ್ನು ಉಳಿಸಿಕೊಳ್ಳುವ ಸವಾಲುಗಳು ನಮ್ಮ ಮುಂದಿವೆ. ಮಾದಕ ವಸ್ತುಗಳಿಗೆ ಮಕ್ಕಳೇ ಹೆಚ್ಚಾಗಿ ದಾಸರಾಗುತ್ತಿರುತ್ತಿರುವುದು ಆತಂಕಕಾರಿ ವಿಷಯ. ಪ್ರತಿಯೊಬ್ಬ ಪೋಷಕರು ಮಕ್ಕಳಿಂದ ಅಂತರ ಕಾಪಾಡಿಕೊಳ್ಳದೆ, ಅವರ ಚಟುವಟಿಕೆ ಮೇಲೆ ನಿಗಾ ವಹಿಸಿ,ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಆ ಮೂಲಕ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬೇಕಿದೆ ಎಂದು ಅಲ್ತಾಫ್ ಅಹಮದ್ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷೆ ಡಾ. ಶಾಜಿಯಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳು ಎಲ್ಲ ವಿಭಾಗದಲ್ಲಿಯೂ ಸಹ ಆಸಕ್ತಿಯನ್ನು ಹೊಂದಿರಬೇಕು, ಸ್ಪರ್ಧಿಸಬೇಕು. ಅದಕ್ಕೆ ಸೂಕ್ತ ವಾತಾವರಣ, ತರಬೇತಿ ಹಾಗೂ ಮಾರ್ಗದರ್ಶನವನ್ನು ಶಾಲೆಯು ಕಲ್ಪಿಸುತ್ತಿದೆ ಎಂದರು.

ಈ ಸಂದರ್ಭದಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಡಯಟ್ ನ ಕೆಟಿಬಿಎಸ್ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಪಿಯು ವಿಭಾಗದ ಡೀನ್ ಡಾ. ಫಕ್ರುದ್ದೀನ್, ಪ್ರಾಂಶುಪಾಲರಾದ ಸ್ಟಾನ್ಲಿ ಪಾಲ್, ಶಾಲೆಯ ಪ್ರಾಂಶುಪಾಲರಾದ ಯೇಸುದಾಸ್, ಉಪ ಪ್ರಾಂಶುಪಾಲ ಲತಾ ಆನಂದ್ , ಉಪನ್ಯಾಸಕ ಅರುಣ್ ಕವಣಾಪುರ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮದ ನಂತರ ಬಾಹುಬಲಿ, ಅವತಾರ್, ಮೈಕೇಲ್ ಜಾಕ್ಸನ್, ಲಯನ್, ಫೈಯರ್, ಡೆವಿಲ್ ವೇಷಧಾರಿಗಳಾಗಿ ಹೆಜ್ಜೆ ಹಾಕಿದ ಮಕ್ಕಳ ನೃತ್ಯ ನೆರೆದಿದ್ದ ಪೋಷಕರನ್ನು ಮಂತ್ರ ಮುಗ್ಧರನ್ನಾಗಿಸಿತು. ವಿವಿಧ ಶೈಲಿಯ ನೃತ್ಯ ಸಂಯೋಜನೆ ಹಾಗೂ ಮಕ್ಕಳ ಪ್ರತಿಭೆಗೆ ನೆರದಿದ್ದ ಸಾವಿರಾರು ಪೋಷಕರು ಸಾಕ್ಷಿಯಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ