ಮಕ್ಕಳ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡುವ ಕಾರ್ಯವಾಗಲಿ

KannadaprabhaNewsNetwork |  
Published : Nov 24, 2026, 03:00 AM IST
ಮುದ್ದೇಬಿಹಾಳ | Kannada Prabha

ಸಾರಾಂಶ

ಗ್ರಾಮೀಣ ಭಾಗದ ಪ್ರತಿಭೆಗಳು ವಿದೇಶದ ನೆಲದಲ್ಲಿ ನಮ್ಮ ದೇಶದ ಕೀರ್ತಿ, ಗೌರವ ಬೆಳಗಲು ಹೊರಟಿರುವುದು ಅತ್ಯಂತ ಸಂತಸ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಶನ್‌ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಗ್ರಾಮೀಣ ಭಾಗದ ಪ್ರತಿಭೆಗಳು ವಿದೇಶದ ನೆಲದಲ್ಲಿ ನಮ್ಮ ದೇಶದ ಕೀರ್ತಿ, ಗೌರವ ಬೆಳಗಲು ಹೊರಟಿರುವುದು ಅತ್ಯಂತ ಸಂತಸ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಸಮಾಜ ಸೇವಕ ಹಾಗೂ ಅಸ್ಕಿ ಫೌಂಡೇಶನ್‌ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.

ಸ್ಥಳೀಯ ಸಂಗಮೇಶ್ವರ ಪತ್ತಿನ ಸಹಕಾರ ಸಂಘ ನಿ. ದಲ್ಲಿ ಯೂಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ವತಿಯಿಂದ ಭೂತಾನ್ ದೇಶದಲ್ಲಿ ನಡೆಯುವ ಕಬ್ಬಡ್ಡಿ ಚಾಂಪಿಯನ್ ಶಿಪ್ ಹಾಗೂ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ತೆರಳುತ್ತಿರುವ ಮಕ್ಕಳಿಗೆ ಅಸ್ಕಿ ಫೌಂಡೇಶನ್‌ ವತಿಯಿಂದ ನೀಡಲಾದ ಟ್ರ್ಯಾಕ್‌ಸೂಟ್ ವಿತರಣಾ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೆ ಟ್ರ್ಯಾಕ್‌ಸೂಟ್‌ ವಿತರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಮೂಡಿಸಿ, ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಕಾರ್ಯವಾಗಬೇಕು. ಮಕ್ಕಳೇ ದೇಶದ ಭವಿಷ್ಯವಾಗಿದ್ದು, ಅವರಲ್ಲಿರುವ ಪ್ರತಿಭೆಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ದೊರೆತಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಇಂತಹ ಕ್ರೀಡಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ನಮ್ಮ ಫೌಂಡೇಶನ್ ವತಿಯಿಂದ ಈ ಹಿಂದೆಯೂ ಹಲವು ಬಾರಿ ಅಗತ್ಯ ಸಹಾಯ ಸಹಕಾರ ನೀಡುತ್ತ ಬಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ನಮ್ಮ ಫೌಂಡೇಶನ್ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುವ ಮಕ್ಕಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಅವರ ಸಾಧನೆಯ ಸಮಯ ಹಾಗೂ ಸಾಮರ್ಥ್ಯ ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ತರಬೇತಿ ನೀಡಬೇಕು. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಪ್ರತಿಭೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು. ಇಂದಿನ ದಿನಗಳಲ್ಲಿ ಶಾಲೆಗಳಲ್ಲಿ ಪಠ್ಯ ಚಟುವಟಿಕೆಗಳಿಗೆ ನೀಡುವ ಆದ್ಯತೆಯಂತೆ ಕ್ರೀಡೆಗಳಿಗೂ ಸಮಾನ ಪ್ರಾಮುಖ್ಯತೆ ನೀಡಬೇಕಿದೆ. ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮುಂದಾದಾಗ ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಸಹಕಾರ ನೀಡಬೇಕು. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.2ರಷ್ಟು ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಿದ್ದರೂ ಅವುಗಳ ಬಗ್ಗೆ ಅನೇಕ ಕ್ರೀಡಾಪಟುಗಳಿಗೆ ಸರಿಯಾದ ಮಾಹಿತಿ ಇಲ್ಲ. ಕ್ರೀಡಾ ಇಲಾಖೆ ಈ ಸೌಲಭ್ಯಗಳ ಕುರಿತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರಿಗೆ ದೊರೆಯಬೇಕಾದ ಅವಕಾಶಗಳನ್ನು ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.ಸೂರಜ್ ರಿಸಾಲದಾರ ಮಾತನಾಡಿ, ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ, ತರಬೇತಿ ಹಾಗೂ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಭಾರತದಲ್ಲಿ ಅಪಾರ ಕ್ರೀಡಾ ಪ್ರತಿಭೆಗಳಿದ್ದರೂ ಅವರಿಗೆ ನಿರೀಕ್ಷಿತ ಮಟ್ಟದ ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆಯುತ್ತಿಲ್ಲ. ಆಂಧ್ರಪ್ರದೇಶ ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಕ್ರೀಡಾಪಟುಗಳನ್ನು ಗುರುತಿಸಿ ಉತ್ತೇಜಿಸುತ್ತಿವೆ ಚೀನಾ, ಅಮೇರಿಕಾ, ಥೈಲ್ಯಾಂಡ್‌ನಂತಹ ರಾಷ್ಟ್ರಗಳು ಒಲಂಪಿಕ್ಸ್ ಹಾಗೂ ಏಷ್ಯನ್‌ಗೇಮ್ಸ್‌ಗಳಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ದೊಡ್ಡಮೊತ್ತದ ಬಹುಮಾನ ನೀಡುತ್ತಿವೆ. ಇತರ ದೇಶಗಳಿಗೆ ಹೋಲಿಸಿದರೇ ನಮ್ಮ ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಇನ್ನಷ್ಟು ಆದ್ಯತೆ ನೀಡುವ ಅಗತ್ಯವಿದೆ ಎಂದರು. ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ ಅನ್ನುವ ಕಾರಣಕ್ಕೆ ಪೋಷಕರು ಮಕ್ಕಳನ್ನು ಕ್ರೀಡಾ ಕ್ಷೇತ್ರದಿಂದ ದೂರವಿಡಬಾರದು. ಒಬ್ಬ ಕ್ರೀಡಾಪಟು ತನ್ನ ಸಾಧನೆಯಿಂದ ಇಡೀ ಜಗತ್ತನ್ನೇ ಗುರುತಿಸಿಕೊಳ್ಳಬಹುದು. ಕ್ರೀಡಾ ಸಂಘಟನೆಗಳು ಹಾಗೂ ಯೂಥ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ ಇಂತಹ ವೇದಿಕೆಗಳು ಒದಗಿಸುವ ಅವಕಾಶಗಳನ್ನು ಎಲ್ಲರೂ ಸದ್ಬಳಕೆ ಮಾಡಿಕೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಸಂಗಮೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಡಿ.ಬಿರಾದಾರ, ಸಂಸ್ಥಾಪಕ ಆರ್.ಬಿ.ಪಾಟೀಲ, ಸ್ನೇಹ ಸಂಗಮ ಗೆಳೆಯರ ಬಳಗದ ಅಧ್ಯಕ್ಷ ವಿಶ್ವನಾಥ ಪಾಟೀಲ, ಬಿ.ಎಂ.ಪಾಟೀಲ, ಶಾಖಾ ವ್ಯವಸ್ಥಾಪಕ ಎಸ್.ಪಿ.ರಾಯಗೊಂಡ, ಬಿ.ಜಿ.ಬಿರಾದಾರ, ಎಸ್.ಕೆ.ರಾಯಗೊಂಡ, ಎಸ್.ಎಸ್.ಬಿರಾದಾರ, ಬಿ.ಎಂ.ಪಾಟೀಲ, ಎಚ್.ಎಸ್.ಬೇಡದ, ಅಶೋಕ ಬಿದರಕುಂದಿ, ರಾಮನಗೌಡ ಪಾಟೀಲ, ಸಂಗಮೆಶ ಮೇಲಿನಮನಿ, ರಾಘವೇಂದ್ರ ನಲವಡೆ, ಶ್ರೀಶೈಲ ಭಾವಿಕಟ್ಟಿ, ಕಬ್ಬಡ್ಡಿ ಶಿಕ್ಷಕರಾದ ಸಿದ್ದರಾಮೇಶ್ವರ ಭಜಂತ್ರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನ್ಯಾಯವಾದಿಗಳಾದ ಎಂ.ಬಿ.ಮುದ್ನಾಳ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಶಿಕ್ಷಣದಿಂದಲೇ ಮಹಿಳೆಯರ ಸಬಲೀಕರಣ ಸಾಧ್ಯ
ರಾಜ್ಯಪಾಲದ ಮಧ್ಯಪ್ರವೇಶಕ್ಕೆ ಆಗ್ರಹ