ಯಲಬುರ್ಗಾ:
ಕ್ಷೇತ್ರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.ತಾಲೂಕಿನ ಬಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಗ್ರಾಪಂ ಕಚೇರಿ ಕಟ್ಟಡದ ಉದ್ಘಾಟನೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಸೋಮವಾರ ಮಾತನಾಡಿದರು.
ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಿಸುವುದು ಅಸಾಧ್ಯದ ಕೆಲಸ. ಆದರೆ, ವಿಶೇಷ ಪ್ರಕರಣದಡಿ ಬಂಡಿ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ಆರೋಗ್ಯ ಕೇಂದ್ರಕ್ಕೆ ತ್ವರಿತವಾಗಿ ತಜ್ಞ ವೈದ್ಯರನ್ನು ನಿಯೋಜಿಸಲಾಗುವುದು. ಗ್ರಾಮದ ಸ್ಮಶಾನ ದಾರಿಯನ್ನು ನರೇಗಾದಡಿ ನಿರ್ಮಿಸಲುಕ್ರಮ ವಹಿಸಲಾಗುತ್ತದೆ. ಸಿಸಿ ರಸ್ತೆ ನಿರ್ಮಾಣಕ್ಕೂ ಕ್ರಮಕೈಗೊಳ್ಳಲಾಗುವುದು ಎಂದರು.
ತಾಲೂಕಿನಲ್ಲಿ ದೇವಸ್ಥಾನ ಅಭಿವೃದ್ಧಿಗೆ ಸಂಪೂರ್ಣವಾಗಿ ಹಣ ಕೊಡಲು ಆಗುವುದಿಲ್ಲ. ೨೦೧ ದೇವಸ್ಥಾನಗಳಿಗೆ ತಲಾ ₹ ೪ ಲಕ್ಷದಂತೆ ₹ ೫ ಕೋಟಿ ಕೊಡಲಾಗುವುದು ಎಂದ ಅವರು, ನಾನು ಶಾಸಕನಾದ ವೇಳೆ ತಾಲೂಕಿನಲ್ಲಿ ೭ ಇದ್ದ ಹೈಸ್ಕೂಲ್ ಸಂಖ್ಯೆ ಇದೀಗ ೬೫ಕ್ಕೇರಿದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಮಕ್ಕಳು ಕನ್ನಡ ಶಾಲೆಯಲ್ಲಿ ಓದುವುದರಿಂದ ಬುದ್ಧಿವಂತರಾಗುತ್ತಾರೆ ಎಂದು ಹೇಳಿದರು.ಆ. ೬ರಂದು ನಡೆಯುವ ಸಚಿವ ಸಂಪುಟದಲ್ಲಿ ಕ್ಷೇತ್ರಕ್ಕೆ ಮಂಜೂರಾದ ನರ್ಸಿಂಗ್ ಕಾಲೇಜಿಗೆ ಅನುದಾನ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸುನಾಮಿಯಂತೆ ನಡೆಯುತ್ತಿದ್ದು ಹಣದ ಕೊರತೆ ಇಲ್ಲ ಎಂದರು.
ಜಿಪಂ ಸಿಇಒ ವರ್ಣಿತ್ ನೇಗಿ, ತಾಪಂ ಇಒ ಸಂತೋಷ ಪಾಟೀಲ್, ಹಿರಿಯ ಮುಖಂಡ ಎ.ಜಿ. ಭಾವಿಮನಿ, ಪಿಡಬ್ಲ್ಯೂಡಿ ಎಇಇ ಬಿ. ಮಲ್ಲಿಕಾರ್ಜುನ ಮಾತನಾಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ರತ್ನಮ್ಮ ಮಲ್ಲಪ್ಪ ವಣಗೇರಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಪ್ರಮುಖರಾದ ವೀರನಗೌಡ ಬಳೂಟಗಿ, ಕೆರಿಬಸಪ್ಪ ನಿಡಗುಂದಿ, ಶರಣಪ್ಪ ಗಾಂಜಿ, ಡಾ. ಶಿವನಹೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಶರಣಪ್ಪ ಉಪ್ಪಾರ, ಶೇಖಪ್ಪ ವಣಗೇರಿ, ರಾಜಣ್ಣ ಹಗೇದಾಳ, ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ಎಫ್.ಡಿ. ಕಟ್ಟಿಮನಿ, ಟಿಎಚ್‌ಒ ನೇತ್ರಾವತಿ, ಪಿಡಿಒ ನಾಗೇಶ ನಾಯ್ಕ ಸೇರಿದಂತೆ ಗ್ರಾಮದ ಹಿರಿಯರು ಇತರರು ಇದ್ದರು.