ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಯೊಂದು ಸಮಾಜವೂ ಒತ್ತು ನೀಡಲಿ: ಖಾದರ್

KannadaprabhaNewsNetwork |  
Published : Nov 10, 2026, 01:00 AM IST
ಬಳ್ಳಾರಿಯ ಮಹರ್ಷಿ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಪಿಂಜಾರ್/ನದಾಫ್ ಸಂಘದ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶವನ್ನು ಸಚಿವ ಯು.ಟಿ.ಖಾದರ್ ಅವರು ಉದ್ಘಾಟಿಸಿದರು.  | Kannada Prabha

ಸಾರಾಂಶ

ಸಮಾಜದ ಪ್ರಗತಿ ಕೇವಲ ಆರ್ಥಿಕ ಅಭಿವೃದ್ಧಿಯಿಂದ ಸಾಧ್ಯವಿಲ್ಲ. ಶಿಕ್ಷಣ, ಸಾಮಾಜಿಕ ಜಾಗೃತಿ, ಸಂಘಟನೆ ಹಾಗೂ ಪರಸ್ಪರ ಸಹಕಾರದಿಂದ ಮಾತ್ರ ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯ

ಬಳ್ಳಾರಿ: ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ಪ್ರತಿಯೊಂದು ಸಮಾಜವೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಭವಿಷ್ಯದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪಿಂಜಾರ್/ನದಾಫ್ ಸಂಘದ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಪ್ರಗತಿ ಕೇವಲ ಆರ್ಥಿಕ ಅಭಿವೃದ್ಧಿಯಿಂದ ಸಾಧ್ಯವಿಲ್ಲ. ಶಿಕ್ಷಣ, ಸಾಮಾಜಿಕ ಜಾಗೃತಿ, ಸಂಘಟನೆ ಹಾಗೂ ಪರಸ್ಪರ ಸಹಕಾರದಿಂದ ಮಾತ್ರ ಸಮುದಾಯಗಳು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪಿಂಜಾರ್/ನದಾಫ್ ಸಮಾಜದ ಮುಖಂಡರು ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನಹರಿಸಬೇಕು. ಸಮಾಜದ ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಸಂಕಲ್ಪ ಮಾಡಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಯಾವುದೇ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ವಿಶೇಷವಾಗಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವ ಜತೆಗೆ ಉನ್ನತ ಶಿಕ್ಷಣ ಪಡೆಯಲು ಅಗತ್ಯವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಬೇಕು. ಶಿಕ್ಷಣ ಪಡೆದ ಯುವಜನರು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು ಎಂದು ಸಲಹೆ ನೀಡಿದರು.

ಪಿಂಜಾರ್/ನದಾಫ್ ಸಮಾಜದ ಹಿರಿಯರನ್ನು ಸ್ಮರಿಸಿದ ಸಚಿವರು, ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗಾಗಿ ಹಿಂದಿನ ತಲೆಮಾರಿನವರು ಸಲ್ಲಿಸಿರುವ ಸೇವೆ ಮತ್ತು ಶ್ರಮವನ್ನು ಸ್ಮರಿಸಬೇಕು. ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಯುವಜನರು ಮುನ್ನಡೆಯಬೇಕು. ಸಂಘಟನೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕು. ಸಮಾಜದ ಜನರೊಂದಿಗೆ ತಾವು ಸದಾ ಇದ್ದು, ಅವರ ಅಭಿವೃದ್ಧಿಯ ಕಾರ್ಯಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ಪಿಂಜಾರ್/ನದಾಫ್ ಸಮಾಜವನ್ನು ಪ್ರತಿನಿಧಿಸಿ ರಾಜಕೀಯ ಪ್ರತಿನಿಧಿಗಳು ಇಲ್ಲ ಎಂದು ಕೊರಗಬೇಡಿ, ನಾನೇ ನಿಮ್ಮ ಸಮಾಜದ ಪ್ರತಿನಿಧಿ ಎಂದು ಭಾವಿಸಿ. ನಾನು ನಿಮ್ಮ ಜೊತೆಗಿರುವೆ ಎಂದರು.

ಪಿಂಜಾರ್/ನದಾಫ್ ಸಮಾಜದ ಜೊತೆಗೆ ನನ್ನ ಬಾಂಧವ್ಯ ತುಂಬ ಹಳೆಯದು. ನಾನು ಶಾಸಕನಾಗುತ್ತೇನೆ ಎಂದು ದಿ.ಹಿರೇಹಾಳ್ ಇಬ್ರಾಹಿಂಸಾಬರು ತುಂಬ ಹಿಂದೆಯೇ ನನ್ನ ತಂದೆಗೆ ಹೇಳಿದ್ದರು. ನನ್ನನ್ನು ಮೊಮ್ಮಗ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಹೀಗಾಗಿ ನಾನು ನಿಮ್ಮ ಸಮಾಜದ ಮೊಮ್ಮಗ ಇದ್ದಂತೆ. ನಿಮ್ಮ ಸಮಾಜದಲ್ಲಿ ಶಾಸಕರು ಸಂಸದರು ಇಲ್ಲ ಎಂದು ಕೊರಗಬೇಡಿ. ನಾನೇ ನಿಮ್ಮ ಸಮಾಜದ ಶಾಸಕ ಅಂತ ಭಾವಿಸಿ ಎಂದರಲ್ಲದೆ, ಪಿಂಜಾರ್ ಸಂಘದ ಚಟುವಟಿಕೆಗಳಿಗಾಗಿ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು. ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ, ಮೇಯರ್ ಪಿ.ಗಾದೆಪ್ಪ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಸಂಘದ ರಾಜ್ಯಾಧ್ಯಕ್ಷ ಹೆಚ್‌.ಜಲೀಲ್‌ಸಾಬ್, ಶರ್ಮಾಸ್ ಅಲಿ, ದಾದಾ ಖಲಂದರ್, ವಲಿಸಾಬ್, ಮೌಲಾಲಿ, ಅಮೀನಾಬೀ, ಮಸ್ತಾನ್ ವಲಿ, ಚಂದಾಸಾಬ್, ನಜೀಸಾಬ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸಂಘದ ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ