ಬರಗಾಲದಲ್ಲಿ ಹನಿ ನೀರೂ ಬಂಗಾರ: ಸಿಇಒ

KannadaprabhaNewsNetwork |  
Published : Sep 30, 2026, 01:45 AM IST
ಚಿತ್ರ 29ಬಿಡಿಆರ್‌1ಮನ್ನಳ್ಳಿ ಗ್ರಾಮದ ಬಿಸಿಎಂ ಹಾಸ್ಟೆಲ್‌ಗೆ ತೆರಳಿ ವಿದ್ಯಾರ್ಥಿಗಳ ಸಾಲಿನಲ್ಲಿಯೇ ಕುಳಿತು ಅವರೊಂದಿಗೆ ಉಪಹಾರ ಸವಿದ ಜಿಪಂ ಸಿಇಒ ಗಿತ್ತೆ ಮಾಧವ್‌ ವಿಠ್ಠಲರಾವ್‌. | Kannada Prabha

ಸಾರಾಂಶ

ಬರಗಾಲದ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡುವುದು ಸೂಕ್ತವಲ್ಲ. ಲಭ್ಯವಿರುವ ಪ್ರತಿಯೊಂದು ಹನಿ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಗಿತ್ತೆ ಮಾಧವ ವಿಠ್ಠಲರಾವ್‌ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬರಗಾಲದ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡುವುದು ಸೂಕ್ತವಲ್ಲ. ಲಭ್ಯವಿರುವ ಪ್ರತಿಯೊಂದು ಹನಿ ನೀರನ್ನು ಅತ್ಯಂತ ಜಾಗರೂಕತೆಯಿಂದ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ) ಗಿತ್ತೆ ಮಾಧವ ವಿಠ್ಠಲರಾವ್‌ ಅಧಿಕಾರಿಗಳಿಗೆ ಹಾಗೂ ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು. ಮಂಗಳವಾರ ಬೆಳ್ಳಂ ಬೆಳಿಗ್ಗೆ ತಾಲೂಕಿನ ಮನ್ನಳ್ಳಿ, ಬರೂರ ಹಾಗೂ ನಾಗೂರಾ ಗ್ರಾಮಗಳಿಗೆ ದಿಢೀರ್‌ ಭೇಟಿ ನೀಡಿದ ಅವರು, ಗ್ರಾಮಗಳಲ್ಲಿ ನಡೆಯುತ್ತಿರುವ ಹಲವು ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ನೀರು ಸರಬರಾಜು ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದರು.ಮನ್ನಳ್ಳಿ ಗ್ರಾಮದಲ್ಲಿ ನೀರಿನ ಸಂಪರ್ಕ ತಪಾಸಣೆ ನಡೆಸುತ್ತಿದ್ದ ವೇಳೆ, ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಟ್ಯಾಂಕ್‌ನಿಂದ ಅನಗತ್ಯವಾಗಿ ನೀರು ಹರಿದು ಪೋಲಾಗುತ್ತಿರುವುದನ್ನು ಗಮನಿಸಿದ ಸಿಇಒ, ಪ್ರಸ್ತುತ ಜಿಲ್ಲೆಯಲ್ಲಿ ನೆಲೆಯೂರಿರುವ ಬರಗಾಲದ ಸ್ಥಿತಿಯನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರನ್ನು ಪೋಲು ಮಾಡಲು ಬಿಡಬಾರದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ, ತಕ್ಷಣವೇ ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಸೂಕ್ತ ಮತ್ತು ವ್ಯವಸ್ಥಿತ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದರು.

ಮನ್ನಳ್ಳಿ ಮತ್ತು ಬರೂರ ಗ್ರಾಮಗಳಲ್ಲಿ ನಡೆಯುತ್ತಿರುವ ವಿಬಿ ಜಿ ರಾಮ್‌ ಜಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಸಿಇಒ ಅವರು, ಸ್ಥಳದಲ್ಲಿದ್ದ ಕಾರ್ಮಿಕರ ಹಾಜರಾತಿಯನ್ನು ತಾವೇ ಖುದ್ದಾಗಿ ಪಡೆದರು. ಬಳಿಕ ಕೆಲಸಗಾರರೊಂದಿಗೆ ಕಾಯಕದಲ್ಲಿ ತೊಡಗಿಸಿಕೊಂಡು ಶ್ರಮದಾನದ ಅನುಭವ ಪಡೆದದ್ದು ವಿಶೇಷವಾಗಿತ್ತು.ಬರೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ವೇಳೆ, ಜನರು ತಮ್ಮ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವದ ಕುರಿತು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಇಒ ಅವರು, ಗ್ರಾಮದ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಅಧಿಕಾರಿ ಮಾಣಿಕರಾವ್‌ ಪಾಟೀಲ್‌, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕರಾದ ಲಕ್ಷ್ಮಿ ಬಿರಾದರ್‌, ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಸಂಜುಕುಮಾರ, ಟೆಸಿ ವಿಷ್ಣು ಕುಲಕರ್ಣಿ, ಟಿಎ ಮಿಥುನ್‌, ಐಇಸಿ ಸಂಯೋಜಕರಾದ ಸತ್ಯಜೀತ್‌ ನೀಡೋದಾಕರ್‌ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸಿದ ಜಿಪಂ ಸಿಇಒ ಗಿತ್ತೆ: ಇದಕ್ಕೂ ಮುನ್ನ ಮನ್ನಳ್ಳಿ ವಸತಿ ಶಾಲೆಗೆ ಭೇಟಿ ನೀಡಿದ ಜಿಪಂ ಸಿಇಒ ಗಿತ್ತೆ ಮಾಧವ್‌ ವಿಠ್ಠಲರಾವ್‌ ಅವರು ವಿದ್ಯಾರ್ಥಿಗಳ ಕೊಠಡಿಗಳನ್ನು ಪರಿಶೀಲಿಸಿ, ಮಂಚಗಳ ಸುರಕ್ಷತೆಯ ಬಗ್ಗೆ ವಾರ್ಡನ್‌ಗೆ ಅಗತ್ಯ ನಿರ್ದೇಶನ ನೀಡಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಪಠ್ಯಕ್ರಮ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿ ಸಿದಂತೆ ಸಂವಾದ ನಡೆಸಿದರು. ಅಲ್ಲದೆ, ಗ್ರಾಮದ ಕೂಸಿನ ಮನೆ, ಗ್ರಂಥಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಆಸ್ಪತ್ರೆಯ ಪ್ರತಿಯೊಂದು ವಾರ್ಡ್‌, ಫಾರ್ಮಸಿಯಲ್ಲಿನ ಔಷಧಗಳ ದಾಸ್ತಾನು ಮತ್ತು ಲ್ಯಾಬೋರೇಟರಿಯ ತಪಾಸಣಾ ವ್ಯವಸ್ಥೆಯನ್ನು ವೀಕ್ಷಿಸಿದರು. ನಂತರ ಗ್ರಾಮದ ಬಿ.ಸಿ.ಎಂ. ಹಾಸ್ಟೆಲ್‌ಗೆ ತೆರಳಿ, ವಿದ್ಯಾರ್ಥಿಗಳ ಸಾಲಿನಲ್ಲಿಯೇ ಕುಳಿತು ಅವರೊಂದಿಗೆ ಉಪಹಾರ ಸವಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನಾಂಬೆ ಜಾತ್ರೆ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಬಿಂಬಿಸುವಂತಿರಲಿ
ಕೋಡಿಹಳ್ಳಿ ಚಂದ್ರಶೇಖರ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ