ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ಗಾನ ವೈಭವ ಹಾಗೂ ಸಾಧಕರಿಗೆ ‘ಕರ್ನಾಟಕ ಸಾರ್ವಭೌಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸನಾಂಬೆ ದೇವಿಯ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವಿದೆ. ಪ್ರತಿವರ್ಷ ದೇಶವಿದೇಶಗಳಿಂದ ಭಕ್ತರು ಆಗಮಿಸುವ ಈ ಜಾತ್ರೆಯನ್ನು ಇನ್ನಷ್ಟು ವ್ಯವಸ್ಥಿತವಾಗಿ, ವೈಭವಯುತವಾಗಿ ಆಚರಿಸುವ ಮೂಲಕ ಹಾಸನದ ಕೀರ್ತಿಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದರು.
ಕಳೆದ ಬಾರಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಂದರ್ಭದಲ್ಲಿ "ತಾಯಿ, ನನಗೂ ಒಂದು ಅವಕಾಶ ಕೊಡು. ನಿನ್ನ ಸೇವೆ ಮಾಡಲು ನನ್ನನ್ನು ಜಿಲ್ಲಾ ಉಸ್ತುವಾರಿ ಸಚಿವನನ್ನಾಗಿ ಮಾಡು " ಎಂದು ಪ್ರಾರ್ಥಿಸಿದ್ದೆ. ತಾಯಿಯ ಆಶೀರ್ವಾದದಿಂದ ಇಂದು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ ಎಂದು ಶಿವಲಿಂಗೇಗೌಡ ಭಾವುಕರಾಗಿ ಸ್ಮರಿಸಿದರು. ಈ ಬಾರಿ ಹಾಸನಾಂಬೆ ಜಾತ್ರೆಯನ್ನು ಜಿಲ್ಲೆಯ ನಾಡಹಬ್ಬವನ್ನಾಗಿ ರೂಪಿಸುವ ಉದ್ದೇಶವಿದ್ದು, ಜಾತ್ರೆಯ ಯಶಸ್ಸಿಗೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಕರೆ ನೀಡಿದರು.ಅರಸೀಕೆರೆಯಲ್ಲಿ ಹುಟ್ಟಿ ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಕನ್ನಡಪರ ಸಂಘಟನೆಯನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತನ್ನದೇ ಆದ ಸಂಘಟನಾ ಶಕ್ತಿಯನ್ನು ಬೆಳೆಸಿಕೊಂಡಿದ್ದು, ಕನ್ನಡದ ವಿಚಾರದಲ್ಲಿ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಟಿ.ಎ. ನಾರಾಯಣಗೌಡರು ಬೆಂಗಳೂರಿನಲ್ಲಿ ಸಂಘಟನೆಗೆ ಸ್ವಂತ ಕಟ್ಟಡ ನಿರ್ಮಿಸಿ, ಅದನ್ನು ಕನ್ನಡ ನಾಡುನುಡಿ ರಕ್ಷಣೆಯ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಸಂಕಲ್ಪ ಮಾಡಿರುವುದು ಅಭಿನಂದನೀಯ ಎಂದರು. ಬೆಂಗಳೂರು ನಗರವನ್ನು ಕೆಂಪೇಗೌಡರು ಕಟ್ಟಿದಂತೆ, ಕನ್ನಡಪರ ಸಂಘಟನೆಯ ಮೂಲಕ ಕನ್ನಡಿಗರ ಹಕ್ಕು ಮತ್ತು ಭಾಷೆಯ ರಕ್ಷಣೆಗೆ ನಾರಾಯಣಗೌಡರು ಶ್ರಮಿಸುತ್ತಿದ್ದಾರೆ. ಅವರ ಕನ್ನಡಪರ ಕಾರ್ಯಗಳಿಗೆ ಇನ್ನಷ್ಟು ಬಲ ದೊರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ೧೨ ಸಾಧಕರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ‘ಕರ್ನಾಟಕ ಸಾರ್ವಭೌಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕೃಷಿ, ಹೈನುಗಾರಿಕೆ ಹಾಗೂ ಕೃಷಿ ಉದ್ಯಮ ಕ್ಷೇತ್ರದ ಡಾ. ಎಂ.ಸಿ. ರಂಗಸ್ವಾಮಿ, ಸಮಾಜಸೇವಕ ಬಿ.ಪಿ. ಕೃಷ್ಣಗೌಡ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಂಚೇಗೌಡ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಎನ್. ಆರ್. ಪುರುಷೋತ್ತಮ್, ಸಹಕಾರ ಕ್ಷೇತ್ರದ ಜಗದೀಶ್ ಕಬ್ಬಿನಹಳ್ಳಿ, ಹೃದಯ ಶಸ್ತ್ರಚಿಕಿತ್ಸಾ ಅರಿವಳಿಕೆ ತಜ್ಞ ಡಾ. ವಿನಾಯಕ ಎನ್, ಶಿಕ್ಷಣತಜ್ಞ ಹಾಗೂ ಉದ್ಯಮಿ ಟೈಮ್ಸ್ ಗಂಗಾಧರ್ ಬಿ.ಕೆ, ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಎಸ್.ಎಚ್. ರಾಜಶೇಖರ್, ಕೃಷಿಕ ಹಾಗೂ ಸಮಾಜಸೇವಕ ಆರ್.ಎಲ್. ದೇವರಾಜ್, ಶಿಕ್ಷಕಿ ಹಾಗೂ ಪರಿಸರ ಕಾರ್ಯಕರ್ತೆ ಎಚ್.ಜಿ. ಕಾಂಚನಮಾಲ, ನಿವೃತ್ತ ಸಾರಿಗೆ ಇಲಾಖೆ ಅಧೀಕ್ಷಕ ಸೈಯದ್ ಸಾಜದ್ ಪಾಷ ಹಾಗೂ ಹಾಸನ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಪರುಶುರಾಮ ಅವರನ್ನು ಗೌರವಿಸಲಾಯಿತು.