ವಿಠಲ ಗ್ರಾಮದ ಗುಳದಮನೆ ಸರ್ಕಾರಿ ಹಿರಿಯ ಪ್ರಾ.ಶಾಲೆಯಲ್ಲಿ ನಮ್ಮ ಶಾಲೆ, ನಮ್ಮ ಕೊಡುಗೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್ ಕರೆ ನೀಡಿದರು.
ತಾಲೂಕಿನ ವಿಠಲ ಗ್ರಾಮದ ಗುಳದಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಮ್ಮ ಶಾಲೆ, ನಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿ ಗುಳದಮನೆ ಸರ್ಕಾರಿ ಶಾಲೆ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದೆ. ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತದೆ. ಈ ಹಿಂದೆ ಶಿಕ್ಷಕರು ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ಶಾಲೆ ಅಭಿವೃದ್ಧಿ ಹೊಂದದೆ ಮಕ್ಕಳ ಸಂಖ್ಯೆಯೂ ಕ್ಷೀಣಿಸಿದೆ. ಮುಂದಿನ ದಿನ ಗಳಲ್ಲಿ ಈ ಶಾಲೆ ಅಭಿವೃದ್ಧಿ ಬಗ್ಗೆ ಶಾಸಕರ ಗಮನಕ್ಕೆ ತಂದು ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದರು.ಗ್ರಾಪಂ ಸದಸ್ಯೆ ಅಶ್ವಿನಿ ಮಾತನಾಡಿ, ಶಿಕ್ಷಕರು ಶಾಲೆ ಅಭಿವೃದ್ಧಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಬೇಕು. ಗ್ರಾಪಂಗೆ ಬಂದು ಶಾಲೆ ಮೂಲ ಭೂತ ಸೌಕರ್ಯ ಕೊರತೆ ಬಗ್ಗೆ ಚರ್ಚಿಸಿ ಮನವಿ ನೀಡಬೇಕು. ಗ್ರಾಮ ಪಂಚಾಯಿತಿಯಿಂದ ಎಲ್ಲಾ ಸಹಕಾರ ನೀಡಲಾಗುವುದು ಎಂದರು.ಶಿಕ್ಷಕಿ ಶಿಲ್ಪಾ ತಿಮ್ಮೇಶ್ ಮಾತನಾಡಿ, ಹಿಂದೆ 21 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಆದರೆ ಈಗ 13 ಮಕ್ಕಳು ಬೇರೆ ಶಾಲೆಗೆ ದಾಖಲಾಗಿದ್ದು 8 ಮಕ್ಕಳು ಮಾತ್ರ ಉಳಿದಿದ್ದಾರೆ. ಶಾಲೆಯಲ್ಲಿ ಯಾವುದೇ ಸೌಕರ್ಯಗಳಿಲ್ಲ. ನಾವು ಶಾಲೆ ಬಿಟ್ಟು ಹೋದ ಮಕ್ಕಳ ಪೋಷಕರಿಗೆ ಮನ ವೊಲಿಸಿದ್ದೇವೆ. ಮುಂದಿನ ಸಾಲಿನಿಂದ ಇದೇ ಶಾಲೆಗೆ ಸೇರಿಸುವುದಾಗಿ ಭರವಸೆ ನೀಡಿದ್ದಾರೆ. ಕಟ್ಟಡ ಬಿರುಕು ಬಿಟ್ಟಿದೆ. ಭಯದ ವಾತಾವರಣದಲ್ಲಿ ತರಗತಿಗಳನ್ನು ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಪಂನಿಂದ ಶಾಲೆ ದುರಸ್ತಿಗೆ ಅನುದಾನ ಮೀಸಲಿರಿಸಬೇಕು ಎಂದು ಮನವಿ ಮಾಡಿದರು.ಸಭೆ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಿಜು ವಹಿಸಿದ್ದರು. ಶಾಲೆ ಹಾಗೂ ಮಕ್ಕಳಿಗೆ ಬೇಕಾದ ಅಗತ್ಯ ಪರಿಕರ ನೀಡುವುದಾಗಿ ದಾನಿಗಳು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶಿಲ್ಪ ತಿಮ್ಮೇಶ್, ಶಾಲಾಭಿವೃದ್ಧಿ ಅಧ್ಯಕ್ಷ ಹಾಗೂ ಸದಸ್ಯರು ಒಟ್ಟಾಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶಾಲಾ ದುರಸ್ತಿಗೆ ಅನುದಾನ ನೀಡುವಂತೆ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಪಿ.ಶೈಲಾಮಹೇಶ್, ಸದಸ್ಯರಾದ ಚಂದ್ರಶೇಖರ್, ಲಿಲ್ಲಿಮಾತುಕುಟ್ಟಿ, ವಾಣಿನರೇಂದ್ರ, ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿಂದ್ಯಾಹೆಗ್ಡೆ, ಗ್ರಾಮಸ್ಥರಾದ ಮಂಜುನಾಥ್, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.