- ಶಿವಗಂಗೋತ್ರಿ ದಾವಣಗೆರೆ ವಿ.ವಿ.ಯಲ್ಲಿರುವ ಕೊಠಡಿ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂ.4ರಂದು ಬೆಳಗ್ಗೆ 8ರಿಂದ ತಾಲೂಕಿನ ತೋಳಹುಣಸೆ ಗ್ರಾಮದ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಹಿನ್ನೆಲೆ ಇವಿಎಂ ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರದ ಸಿದ್ಧತೆಯನ್ನು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಪನಹಳ್ಳಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಎಲ್ಲ ಕ್ಷೇತ್ರಗಳ ಮತ ಎಣಿಕೆ ಶಿವಗಂಗೋತ್ರಿಯಲ್ಲಿ ನಡೆಯಲಿದೆ ಎಂದರು.ದಾವಿವಿ ಕಾಮರ್ಸ್ ಬ್ಲಾಕ್ ನೆಲಮಹಡಿಯಲ್ಲಿ 4 ಕ್ಷೇತ್ರ ಮತ್ತು ರಾಜ್ಯಶಾಸ್ತ್ರ ಬ್ಲಾಕ್‍ನ ಮೊದಲ ಮಹಡಿಯಲ್ಲಿ 4 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮೇ 7ರಂದು ಮತದಾನ ನಡೆಯುವುದರಿಂದ ಮತದಾನ ನಂತರ ಇ.ವಿ.ಎಂ.ಗಳನ್ನು ಡಿಮಸ್ಟರಿಂಗ್ ಕೇಂದ್ರದಿಂದ ಭದ್ರತೆಯೊಂದಿಗೆ ಎಣಿಕೆ ಕೇಂದ್ರಕ್ಕೆ ತಂದು ಭದ್ರತಾ ಕೊಠಡಿಯಲ್ಲಿ ಮತಪೆಟ್ಟಿಗೆ ಕಾಯ್ದಿರಿಸಲಾಗುತ್ತದೆ. ಮೇ 8ರಿಂದ ಎಣಿಕೆ ನಡೆಯುವವರೆಗೆ ಅರೆ ಸೇನಾಪಡೆಯ ಭದ್ರತೆಯೊಂದಿಗೆ ಜೂನ್ 4ರಂದು ನಡೆಯುವ ಎಣಿಕೆವರೆಗೆ ಸಂಪೂರ್ಣ ಸರ್ಪಗಾವಲಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮತದಾನದ ನಂತರ ಇವಿಎಂ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸುವುದರಿಂದ ಮತ ಎಣಿಕೆ ಸಿದ್ಧತೆ ಈಗಲೇ ಮಾಡಿಕೊಳ್ಳಬೇಕಾಗಿದ್ದು, ಸಿದ್ಧತೆ ಪರಿಶೀಲಿಸಿದ್ದೇವೆ ಎಂದರು.
- - - ಬಾಕ್ಸ್-1ಎಣಿಕೆ ಪೂರ್ವ ಇವಿಎಂ ಭದ್ರತೆಗೆ ಟುಟೈರ್ ಪದ್ಧತಿ ಮತದಾನ ನಂತರ ಇವಿಎಂ ಸಂಗ್ರಹಿಸಲಾದ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಕಣ್ಗಾವಲು ಜೊತೆಗೆ 100 ಮೀಟರ್ ವ್ಯಾಪ್ತಿಯೊಳಗೆ ಸಿಎಪಿಎಫ್ ಕೇಂದ್ರ ಸಶಸ್ತ್ರ ಪೊಲೀಸ್ ಫೋರ್ಸ್ ಭದ್ರತೆ ನೀಡಲಾಗಿದೆ. ಅನಂತರ ರಾಜ್ಯ ಸಶಸ್ತ್ರ ಮೀಸಲು ಪಡೆಯ ಭದ್ರತೆ ಒದಗಿಸಲಾಗಿದೆ. ಚುನಾವಣಾಧಿಕಾರಿಗಳು ಪ್ರತಿದಿನ ಎರಡು ಬಾರಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸುವರು.
ಬಾಕ್ಸ್-2 ಭದ್ರತೆ ಪರಿಶೀಲನೆಗೆ ಅಭ್ಯರ್ಥಿಗಳಿಗೂ ಅವಕಾಶ ಮೇ 7ರಂದು ನಡೆಯುವ ಮತದಾನ ನಂತರ 1946 ಮತಗಟ್ಟೆಗಳ ಮತಪೆಟ್ಟಿಗೆಗಳನ್ನು ಮತ ಎಣಿಕೆ ಕೇಂದ್ರದಲ್ಲಿನ ಭದ್ರತಾ ಕೊಠಡಿಗಳಲ್ಲಿ ಕ್ಷೇತ್ರವಾರು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಎಲ್ಲ ಭದ್ರತಾ ಕೊಠಡಿಗಳ ಸುತ್ತಲೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಎಲ್ಲ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸೀಲ್ ಮಾಡಲಾಗಿರುತ್ತದೆ.
- - - -30ಕೆಡಿವಿಜಿ14, 15: