ಸವಣೂರು: ಇಲ್ಲಿಯ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ಬಿತ್ತನೆ ಬೀಜ ವಿತರಣೆಗೆ ತಡವಾಗಿ ಆಗಮಿಸಿ ಚಾಲನೆ ನೀಡಲು ಮುಂದಾದ ಶಾಸಕರ ಸಹೋದರ ಮುನ್ನಾ ಪಠಾಣಗೆ ಅವಕಾಶ ನೀಡದೇ ರೈತರು ಮುತ್ತಿಗೆ ಹಾಕಿ ವಾಗ್ವಾದ ಕೈಗೊಂಡರು. ಈ ವೇಳೆ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಚಾಲನೆ ನೀಡಲು ಸ್ಥಳೀಯ ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಆಗಮಿಸಬೇಕಾಗಿತ್ತು. ಆದರೆ, ಶಾಸಕರು ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಸಹೋದರ ಮುನ್ನಾ ಪಠಾಣ ಅವರು ಬಿತ್ತನೆ ಬೀಜ ವಿತರಣೆಗೆ ಆಗಮಿಸುತ್ತಾರೆ ಎಂದು ಅಧಿಕಾರಿಗಳು ಹಾಗೂ ಕಾಂಗ್ರೆಸ್ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡರು. ರೈತರು ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ವಾಗ್ವಾದ ಕೈಗೊಂಡು, ಶಾಸಕರು ಬೇಕಾದರೆ ಬರಲಿ ನಾವು ಕಾಯಲು ತಯಾರಿದ್ದೇವೆ. ಅವರ ಕುಟುಂಬಸ್ಥರಿಗಾಗಿ ನಾವು ಕಾಯಲು ತಯಾರಿಲ್ಲ. ಬೆಳಗ್ಗೆ 5 ಗಂಟೆಗೆ ಆಗಮಿಸಿ ಮಳೆ ಸುರಿಯುತ್ತಿದ್ದರೂ ಸಹ ಸರದಿ ಸಾಲಿನಲ್ಲಿ ನಿಂತಿದ್ದೇವೆ. ಅವರು ಬಂದರೂ ಸಹ ಅವರಿಗೆ ವಿತರಣೆಗೆ ಅವಕಾಶ ನೀಡುವದಿಲ್ಲ ಎಂದು ಪಟ್ಟು ಹಿಡಿದರು. ತಕ್ಷಣ ಎಚ್ಚೆತ್ತ ಅಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳಿಂದ ಬಿತ್ತನೆ ಬೀಜ ವಿತರಣೆ ಚಾಲನೆ ನೀಡಿದರು.
ಆಧಾರ್, ಉತ್ತಾರಕ್ಕೆ ಸರದಿ: ಬಿತ್ತನೆ ಬೀಜ ವಿತರಣೆ ವಿಳಂಬಕ್ಕೆ ಬೇಸತ್ತ ರೈತರು ಶುಕ್ರವಾರ ವಿತರಣೆ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಆವರಣದಲ್ಲಿ ನೂಕಾಟ ಹೆಚ್ಚಾಯಿತು. ಆದ್ದರಿಂದ, ರೈತರು, ಸರದಿ ಸಾಲಿನಲ್ಲಿ ನಿಂತರೆ ಜಾಗ ಸಾಲದು ಹಾಗೂ ಮಳೆ ಬರುತ್ತಿದೆ ಎಂದು ಪರಸ್ಪರ ಚರ್ಚಿಸಿ ಎಫ್‌ಐಡಿಗಾಗಿ ತಾವುಗಳ ತಂದಿದ್ದ ಆಧಾರ ಕಾರ್ಡ್ ಹಾಗೂ ಉತಾರ ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಸರದಿ ಸಾಲಿನಲ್ಲಿ ಇಟ್ಟು ಕಾಯುತ್ತಿರುವದು ಕಂಡು ಬಂದಿತು.ಬಿತ್ತನೆಗೆ ಅವಶ್ಯಕ ಗೊಬ್ಬರ ಹಾಗೂ ಬಿತ್ತನೆ ಬೀಜ ಸಂಗ್ರಹದಲ್ಲಿ ತೊಡಗಿರುವ ರೈತರಿಗೆ ಕೃಷಿ ಇಲಾಖೆ ಹಾಗೂ ರಸಾಯನಿಕ ಗೊಬ್ಬರ ಮಾರಾಟಗಾರರು ಸೂಕ್ತ ಮಾಹಿತಿ ನೀಡದ ಕಾರಣಕ್ಕೆ ರೈತರು ಗೊಂದಲಕ್ಕೆ ಒಳಗಾಗಿರುವುದು ಒಂದೆಡೆಯಾದರೆ, ಕೃಷಿ ಇಲಾಖೆ ಬಿತ್ತನೆ ಬೀಜ ವಿತರಣೆಗೆ ವಿಳಂಬ ಮಾಡುತ್ತಿದೆ ಎಂಬುದು ರೈತರ ಆರೋಪವಾಗಿದೆ.
ಸರ್ಕಾರದ ಆದೇಶದ ಮೇರೆಗೆ ಎಫ್‌ಐಡಿ ಪಡೆದು ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಿಸಲಾಗುತ್ತಿದೆ. ಯಾವುದೇ ಗೊಂದಲ ಇಲ್ಲ ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಇರುತ್ತದೆ. ಸಹಕಾರ ನೀಡುವ ಮೂಲಕ ರೈತರು ಪಡೆದುಕೊಳ್ಳಲು ಮುಂದಾಗಬೇಕು ಎಂದು ಸವಣೂರಿನ ಸಹಾಯಕ ಕೃಷಿ ನಿರ್ದೇಶಕಿ ಸವಿತಾ ಚಕ್ರಸಾಲಿ ಹೇಳಿದರು.